ಪ್ರಜಾಸ್ತ್ರ ಸುದ್ದಿ
ಉಡುಪಿ(Udupi): ಸಂವಿಧಾನಕ್ಕೆ ಸಂಬಂಧಿಸಿದಂತೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಇಂದು ಸ್ಪಷ್ಟನೆ ನೀಡಿದ್ದಾರೆ. ನಾನು ಸಂವಿಧಾನ ಬದಲಿಸಬೇಕೆಂದು ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿಗಳು ಪರಿಶೀಲಿಸಿ ಮಾತನಾಡಬೇಕಿತ್ತು. ರಾಜ್ಯಪಾಲರಿಗೆ ಕೊಟ್ಟ ಪ್ರತಿಯಲ್ಲಿ ಸಂವಿಧಾನ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ ಎಂದಿದ್ದಾರೆ.
ಆಡದೆ ಇರುವ ಮಾತುಗಳಿಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮ್ಮನ್ನು ಖಂಡಿಸುವ, ಪ್ರತಿಭಟಿಸುವ ಕೆಲಸವಾಗುತ್ತಿದೆ. ಸಮಾಜದ ಎಲ್ಲ ವರ್ಗದ ಜನರೊಂದಿಗೆ ಸಹಬಾಳ್ವೆಯಿಂದ ಇದ್ದೇನೆ. ಹಿಂದು ಸಮಾಜಕ್ಕೆ ಹಲವು ಮುಖಗಳಿವೆ. ಅದನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಆಡಿದ ಮಾತಿಗೆ ವಿರೋಧಿಸಿ, ಆಡದ ಮಾತಿಗೆ ಯಾಕೆ ವಿರೋಧ. ವರದಿಗಾರರಿಗೆ ನಾನು ಆಡದೆ ಇರುವ ಮಾತು ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಸಮಾಜದಲ್ಲಿ ಕಲಹ ಸೃಷ್ಟಿಸುವ ಕೆಲಸ ಮಾಡಬಾರದು ಅಂತಾ ಹೇಳಿದರು.
ಜನಗಣತಿ ಹೇಳುವ ಪ್ರಕಾರ ಇದು ಹಿಂದೂಸ್ತಾನ. ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಹೀಗಾಗಿ ಇಲ್ಲಿ ಹಿಂದುಗಳ ಭಾವನೆಗಳಿಗೆ ಬೆಲೆ ಕೊಡುವ ಸರ್ಕಾರ ಬರಬೇಕು ಎಂದಿದ್ದೇನೆ. ಸಂವಿಧಾನ ಶಬ್ಧವನ್ನೇ ಬಳಸಿಲ್ಲ. ಚುನಾಯಿತ ಸರ್ಕಾರಗಳು ಸರ್ವರ ಸರ್ಕಾರವಾಗಬೇಕು. ಅತಿಯಾದ ಮತೀಯ ಓಲೈಕೆ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.