ಪ್ರಜಾಸ್ತ್ರ ಸುದ್ದಿ
ದುಬೈ(Dubai): ಇಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ(ICC Women’s World T-20) ಸೋಮವಾರ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ನ್ಯೂಜಿಲೆಂಡ್ 54 ರನ್ ಗಳಿಂದ ಗೆಲುವು ಸಾಧಿಸುವುದರೊಂದಿಗೆ ಸೆಮಿ ಫೈನಲ್ ತಲುಪಿದೆ. ನ್ಯೂಜಿಲೆಂಡ್ ನೀಡಿದ 111 ರನ್ ಗಳ ಗುರಿಯನ್ನು ಮುಟ್ಟುವಲ್ಲಿ ಪಾಕ್ ಯಡವಿತು. 11.4 ಓವರ್ ಗಳಲ್ಲಿ ಕೇವಲ 56 ರನ್ ಗಳಿಗೆ ಆಲೌಟ್ ಆಯಿತು. ಪಾಕ್ ಸೋಲಿನೊಂದಿಗೆ ಟೀಂ ಇಂಡಿಯಾ ರನ್ ರೇಟ್ ಮೇಲೆ ಸೆಮಿ ಫೈನಲ್ ಗೆ ಹೋಗಬೇಕು ಎನ್ನುವ ಕನಸು ಸಹ ಭಗ್ನವಾಯಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಸುಝಿ ಬೇಟ್ಸ್ 28 ರನ್, ಬ್ರೋಕ್ ಹಲ್ಡಿಯಾ 22, ನಾಯಕಿ ಶೋಫಿ ಡೇವಿನ್ 19 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೀಗೆ ಬಂದು ಹಾಗೇ ಹೋದರು. ಹೀಗಾಗಿ 6 ವಿಕೆಟ್ ನಷ್ಟಕ್ಕೆಸ 110 ರನ್ ಗಳಿಸಿತು. ಈ ವೇಳೆ ಪಾಕ್ ಆಟಗಾರರು ಬರೋಬ್ಬರಿ 8 ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ದಾರೆ. ಇದು ಅಲ್ಲದೆ 10 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದ್ದ ಪಾಕ್ ಮುಂದೆ 2 ರನ್ ಗಳಿಸುವುದರಲ್ಲಿಯೇ 4 ವಿಕೆಟ್ ಕಳೆದುಕೊಂಡು ಸೋಲು ಒಪ್ಪಿಕೊಂಡಿತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಸೆಮಿ ಫೈನಲ್ ತಲುಪಿತು. ಪಾಕ್ ಗೆಲುವು ನೀರಿಕ್ಷೆ ಇಟ್ಟುಕೊಳ್ಳುವ ಸ್ಥಿತಿ ನಿರ್ಮಿಸಿಕೊಂಡಿದ್ದ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ ನಿರಾಸೆಯೊಂದಿಗೆ ಸೆಮಿ ಫೈನಲ್ ನಿಂದ ಹೊರ ಬಿದ್ದಿತ್ತು.