ಪ್ರಜಾಸ್ತ್ರ ಸುದ್ದಿ
ಪ್ಯಾರಿಸ್(Paris): ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್(Olympics) ಟೂರ್ನಿಯಲ್ಲಿ ಭಾರತೀಯ ಕ್ರೀಡಾಪಟುಗಳು(athletes) ಸಾಕಷ್ಟು ಭರವಸೆ ಮೂಡಿಸಿದ್ದರೂ ಪದಕ ಪಡೆಯುವಲ್ಲಿ ಯಡವುತ್ತಿದ್ದಾರೆ. ಹೀಗಾಗಿ ಇದುವರೆಗೂ 3 ಕಂಚು ಪದಕಕ್ಕೆ ತೃಪ್ತಿ ಪಡಬೇಕಾಗಿದೆ. ಅದರಲ್ಲಿ ಶೂಟರ್ ವಿಭಾಗದ ಮನು ಭಾಕರ್ 2 ಕಂಚು ಪದಕ ಪಡೆದಿದ್ದಾರೆ. ಸೋಮವಾರದ ಹೈಲೆಟ್ಸ್ ನೋಡುವುದಾದರೆ..
ಮಹಿಳೆಯರ 400 ಮೀಟರ್ ಓಟದಲ್ಲಿ ಭಾರತದ ಕಿರಣ್ ಪಹಲ್ ನೇರವಾಗಿ ಸೆಮಿ ಫೈನಲ್ ಗೆ ಎಂಟ್ರಿ ಪಡೆಯುವಲ್ಲಿ ವಿಫಲರಾದರು. ಹೀಟ್ ನಲ್ಲಿ 7ನೇ ಸ್ಥಾನ ಗಳಿಸಿದ ಅವರು ರೆಪೆಷಾಜ್ ಸುತ್ತಿನಲ್ಲಿ ಓಡಲಿದ್ದಾರೆ. ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯ ಸೇನ್ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿಯೂ ವಿಫಲರಾದರು. ಮಲೇಷಿಯಾದ ಲೀ ಜಿ ಜಿಯಾ ಎದುರು ಪರಾಭವಗೊಂಡರು.
ಇನ್ನು ಶೂಟಿಂಗ್ ನ ಸ್ಕೀಟ್ ಡಬಲ್ಸ್ ತಂಡದಲ್ಲಿ ಅನಂತ್ ಜೀತ್ ಸಿಂಗ್, ಮಹೇಶ್ವರಿ ಚೌಹಾನ್ ಜೋಡಿ ಕಂಚಿನ ಪದಕದ ಹೋರಾಟಕ್ಕೆ ಎಂಟ್ರಿ ಪಡೆದಿದೆ. ಅರ್ಹತಾ ಸುತ್ತಿನಲ್ಲಿ 146 ಪಾಯಿಂಟ್ ಗಳಿಸಿತು. ಚೀನಾದ ಜಿಯಾಂಗ್ ಯಿಟಿಂಗ್ ಹಾಗೂ ಲಿಯು ಜಿಯಾನ್ ಲಿನ್ ವಿರುದ್ಧ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದೆ. ಟೂರ್ನಿಯಲ್ಲಿ 2 ಕಂಚಿನ ಪದಕ ಜಯಿಸಿ ತಮ್ಮ ಆಟ ಮುಗಿಸಿರುವ 22 ವರ್ಷದ ಶೂಟರ್ ಮನು ಭಾಕರ್ ಟೂರ್ನಿಯ ಮುಕ್ತಾಯ ಸಮಾರಂಭದಲ್ಲಿ ಭಾರತದ ಬಾವುಟ ಹಿಡಿಯಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಹೇಳಿದೆ. ಪುರುಷರಲ್ಲಿ ಯಾರು ಅನ್ನೋದು ನಿರ್ಧಾರವಾಗಬೇಕಿದೆ.
ಭಾರತ ಹಾಕಿ ತಂಡದ ಡಿಫೆಂಡರ್ ಅಮಿತ್ ರೋಹಿದಾಸ್ ಮುಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಭಾನುವಾರ ಬ್ರಿಟಿನ್ ವಿರುದ್ಧ ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ ರೆಫ್ರಿ ರೆಡ್ ಕಾರ್ಡ್ ನೀಡಿದ್ದರು. ಇದರ ಜೊತೆಗೆ ಒಂದು ಪಂದ್ಯಕ್ಕೆ ನಿಷೇಧ ಹೇರಲಾಗಿದೆ. ಇದನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಗೆ ಭಾರತ ಹಾಕಿ ಒಕ್ಕೂಟ ಮನವಿ ಸಲ್ಲಿಸಿತ್ತು. ಇವರ ಮನವಿಯನ್ನು ತಿರಸ್ಕರಿಸಲಾಗಿದೆ. ಹೀಗಾಗಿ ಮಂಗಳವಾರ ಜರ್ಮನಿ ವಿರುದ್ಧ ನಡೆಯುವ ಸೆಮಿ ಫೈನಲ್ ಪಂದ್ಯಕ್ಕೆ ಅಮಿತ್ ರೋಹಿದಾಸ್ ಅಲಭ್ಯರಾಗಿದ್ದು, ಟೆನ್ಷನ್ ಮೂಡಿಸಿದೆ.