ಪ್ರಜಾಸ್ತ್ರ ಸುದ್ದಿ, ಮಹೇಶ ಶರ್ಮಾ
ಚಿಕ್ಕೋಡಿ(Chikkodi): ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಸಂಸತ್ ಚಳಿಗಾಲದ ಅಧಿವೇಶನದ ವೀಕ್ಷಣೆಗೆ ಸಂಸದೆ ಪ್ರಯಾಂಕಾ ಜಾರಕಿಹೊಳಿ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲೆಯ ವ್ಯಾಪ್ತಿಯಲ್ಲಿನ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 15 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ, ವಿಮಾನದ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ.
ಸಂಸತ್ ಚಳಿಗಾಲದ ಅಧಿವೇಶನವನ್ನು ವೀಕ್ಷಿಸಿದ ಬಳಿಕ ಸಂಸದೆ ಪ್ರಿಯಾಂಕಾ ಜಾರಕಹೊಳಿಯವರನ್ನು ಭೇಟಿಯಾಗಿ ತಮ್ಮ ಸಂತಸವನ್ನು ಹಂಚಿಕೊಂಡರು. ಈ ವೇಳೆ ಮಾತನಾಡಿದ ಅವರು, ನನ್ನ ಲೋಕಸಭಾ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಭೇಟಿಯಾದ ಈ ಕ್ಷಣಗಳು ನನಗೆ ಅಪಾರ ಹರ್ಷವನ್ನು ತಂದಿದೆ. ಸಂಸತ್ ಕಲಾಪವನ್ನು ನೇರವಾಗಿ ವೀಕ್ಷಿಸುವ ಅಪೂರ್ವ ಅವಕಾಶವನ್ನು ಅವರಿಗೆ ಕಲ್ಪಿಸಲು ಸಾಧ್ಯವಾದುದು ಸಂತೋಷದ ವಿಷಯ. ಈ ಅನುಭವವು ವಿದ್ಯಾರ್ಥಿನಿಯರ ಜೀವನಕ್ಕೆ ಹೊಸ ದಿಕ್ಕು ನೀಡಲಿ. ದೇಶದ ಪ್ರಜಾಪ್ರಭುತ್ವವನ್ನು ಹತ್ತಿರದಿಂದ ಅರಿತುಕೊಳ್ಳುವ ಪ್ರೇರಣೆ ಮತ್ತು ಶಕ್ತಿಯನ್ನು ತುಂಬಲಿ ಎಂಬುದು ನಮ್ಮೆಲ್ಲರ ಹೃತ್ಪೂರ್ವಕ ಆಶಯ. ಗ್ರಾಮೀಣ ಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟುವ ಈ ಪ್ರಯತ್ನ ಮುಂದೆಯೂ ನಿರಂತರವಾಗಿ ಸಾಗಲಿದ ಎಂದು ಹೇಳಿದರು.




