ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ರಾಜ್ಯ ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪುವಂತೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಹಾಗೂ ಅಧಿಕಾರಿಗಳ ಕ್ರಿಯಾಶೀಲತೆ ಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಸೋಮವಾರ ಬಂದಾಳ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿಗಳ ಕನಸಿನ ಐದು ಗ್ಯಾರೆಂಟಿ ಯೋಜನೆಗಳು ಯಶಸ್ವಿಯಾಗಬೇಕು. ಹೀಗಾಗಿಯೇ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನ ಸಂಪರ್ಕ ಸಭೆ ಮಾಡುವ ಮೂಲಕ ನೇರವಾಗಿ ಜನರ ಸಮಸ್ಯೆ ಆಲಿಸಲು ತಿಳಿಸಿದ್ದಾರೆ.
ಪ್ರತಿ ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಅನುದಾನ ಮಂಜೂರು ಮಾಡುತ್ತಿದೆ. ಗ್ಯಾರೆಂಟಿಗಳಿಂದ ಸರ್ಕಾರದ ಬಳಿ ಹಣವಿಲ್ಲವೆಂದು ವಿಪಕ್ಷಗಳು ಸುಳ್ಳು ಹೇಳುತ್ತಿವೆ. 1 ಲಕ್ಷ ಕೋಟಿಗೂ ಅಧಿಕ ಹಣವನ್ನು ಅಭಿವೃದ್ಧಿ ಪರ ಮೀಸಲು ಇಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಆದ್ದರಿಂದ ಸರ್ಕಾರದ ಯೋಜನೆಗಳನ್ನು ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಬಂದಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಸಿಂದಗಿ, ಓತಿಹಾಳ, ಬೂದಿಹಾಳ ಗ್ರಾಮಗಳಲ್ಲಿನ ಬಹುತೇಕ ಶಾಲೆಗಳಿಗೆ ಶೌಚಾಲಯ, ಕಾಂಪೌಂಡ್, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ನೀಡಬೇಕು ಎಂದು ಸಭೆಯಲ್ಲಿ ಕೇಳಲಾಯಿತು. ಎನ್ಆರ್ ಜಿಇ ಅಡಿಯಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕರು ಹೇಳಿದರು.
ಕೃಷಿ ಇಲಾಖೆ ಜಿಲ್ಲಾ ನಿರ್ದೇಶಕ ಚಂದ್ರಕಾಂತ ಪವಾರ ಮಾತನಾಡಿ, ಜನರು ಗುಳೆ ಗೋಗುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೈತರಿಗೆ ಹಾಗೂ ಮಹಿಳೆಯರು ಸಣ್ಣ ಪುಟ್ಟ ಘಟಕ ಸ್ಥಾಪನೆಗಾಗಿ ಪಿಎಂಎಫ್‌ಎಂಇ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಪ್ರತಿಶತ 50 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 250 ಜನರು ಇದರ ಸದುಪಯೋಗ ಪಡೆದು 1250 ಜನರಿಗೆ ಕೆಲಸ ಕೊಟ್ಟಿದ್ದಾರೆ. ನೀವು ಸಹ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ಪ್ರಯತ್ನಿಸಬೇಕು ಎಂದು ಮಾಹಿತಿ ನೀಡಿದರು.
ಚಿಮ್ಮಲಗಿ ಏತನೀರಾವರಿ ಯೋಜನೆಯ ಕಾಲುವೆ ನಿರ್ಮಾಣ ಅರ್ಧಕ್ಕೆ ನಿಂತು ಹೋಗಿದ್ದು ಅದನ್ನು ಪೂರ್ಣಗೊಳಿಸಲು ಕ್ರಮ ಜರುಗಿಸುವಂತೆ ಪರಸುರಾಮ ದೇವಣಗಾಂವ ವಿನಂತಿಸಿದರು. ಒಟ್ಟು 36 ಕಿಲೋ ಮೀಟರ್ ಕಾಲುವೆಯಲ್ಲಿ 19 ಕಿಲೋ ಮೀಟರ್ ಕಾಮಗಾರಿ ಮುಗಿದಿದ್ದು ಚಿಕ್ಕಸಿಂದಗಿ, ಬಂದಾಳ ಗ್ರಾಮದ ಕೆಲವರ ತಕರಾರು ಮಾಡಿದ್ದು ಅದಕ್ಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇಲಾಖೆಯಿಂದಲ್ಲ ಎಂದು ಶಾಸಕರು ವಿವರಿಸಿದರು. 2016ರಲ್ಲಿ ಮಂಜೂರಾದ ನಮ್ಮ ಮನೆ ಯೋಜನೆಯ ಬಿಲ್ಲು ನೀಡುವಲ್ಲಿ ಗ್ರಾಮ ಪಂಚಾಯ್ತಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಮಹಾದೇವ ಜೋಗುರ ಆರೋಪಿಸಿದರು.
ಹಿರಿಯ ಮುಖಂಡ ಚಂದ್ರಶೇಖರ ದೇವರೆಡ್ಡಿ ಬಂದಾಳ, ಓತಿಹಾ, ಚಿಕ್ಕಸಿಂದಗಿ ಗ್ರಾಮಗಳಿಗೆ ಸೂಕ್ತ ಬಸ್ ಸೌಲಭ್ಯ ಒದಗಿಸುವ ಕುರಿತು ಮನವಿ ಸಲ್ಲಿಸಿದರು. ಜಟ್ಟಿಂಗರಾಯ ಬನ್ನಿಕಟ್ಟಿ ಮಾತನಾಡಿ, ಗ್ರಾಮಗಳಲ್ಲಿ ಚರಂಡಿಗಳು ತೂಂಬಿ ತುಳುಕುತ್ತಿದ್ದು ಸ್ವಚ್ಚಗೊಳಿಸಲು ಕ್ರಕ ಜರುಗಿಸುವಂತೆ ಮನವಿ ಮಾಡಿದರೆ, ಮಲ್ಲಿಕಾರ್ಜುನ ಹಿರೇಕುರಬರ ಶಾಲೆಯ ಹೆಣ್ಣು ಮಕ್ಕಳಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಶಿವಾನಂದ ಸಾಲಿಮಠ ಮಾತನಾಡಿ, ಓತಿಹಾಳ ಗ್ರಾಮದಲ್ಲಿ ದನದ ಆಸ್ಪತ್ರೆಯಿದ್ದು ಅದಕ್ಕೆ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳಾದ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದರು. ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ 5 ಸಾವಿರ ಜಾನುವಾರಗಳು ಇರುವ ಬಗ್ಗೆ ಸಮೀಕ್ಷೆ ಮಾಡಿ ಕ್ರಮ ಜರುಗಿಸುವಂತೆ ಶಾಸಕರು ಸೂಚಿಸಿದರು.
ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಯಮನಪ್ಪ ಹೊಸಮನಿ, ಉಪಾಧ್ಯಕ್ಷೆ ಸರುಬಾಯಿ ನಾಗಾವಿ, ಕೆಡಿಪಿ ಜಿಲ್ಲಾ ಸದಸ್ಯರಾದ ಶಿವಣ್ಣ ಕೊಟಾರಗಸ್ತಿ, ನೂರಹಮ್ಮದ ಅತ್ತಾರ, ಗ್ರಾರೆಂಟಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶ್ರೀಶೈಲ ಕವಲಗಿ, ಅಕ್ಷರ ದಾಸೋಹ ಅಧಿಕಾರಿ ಅರವಿಂದ ಡೋಣೂರ ವೇದಿಕೆ ಮೇಲಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ, ಸುನಂದಾ ಯಂಪೂರೆ, ಶೈಲಜಾ ಸ್ಥಾವರಮಠ ಸೇರಿದಂತೆ ಗ್ರಾಮ ಪಂಚಾಯ್ತಿಯ ಸದಸ್ಯರು, ಸಿಬ್ಬಂದಿ, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ಹಾಜರಿದ್ದರು. ತಾಲೂಕು ಪಂಚಾಯ್ತಿ ಇಓ ರಾಮು ಅಗ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಕೆ.ಚೌದರಿ ಸ್ವಾಗತಿಸಿದರು. ಚಂದ್ರಕಾಂತ ಬೂಯ್ಯಾರ ನಿರೂಪಿಸಿದರು. ಶಿಕ್ಷಕ ಬಸವರಾಜ ಅಗಸರ ವಂದಿಸಿದರು.