ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮಹಾತ್ಮ ಗಾಂಧಿ ಅವರ ಆತ್ಮಕಥೆಯ ಸಂಪುಟ-2ರ ಕುರಿತಾದ ದಸ್ತಾವೇಜುಗಳು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹತ್ತಿರ ಇವೆ. 51 ಪೆಟ್ಟಿಗೆಗಳಲ್ಲಿ ಭದ್ರವಾಗಿವೆ ಎಂದು ಅರ್ಜಿದಾರರು ಹೇಳಿದ್ದಾರೆ. ಅವುಗಳನ್ನು ಪತ್ತೆ ಹಚ್ಚಬೇಕು ಎಂದು ಪುನರಾವಲೋಕನ ಕೋರಿದ್ದರು, ಹೈಕೋರ್ಟ್ ಇದನ್ನು ವಜಾಗೊಳಿಸಿದೆ.
ಜಾಗೃತ ಕರ್ನಾಟಕ ಜಾಗೃತ ಭಾರತ ಸಂಘಟನೆಯ ಅಧ್ಯಕ್ಷ ಕೆ.ಎನ್ ಮಂಜುನಾಥ್ ಎಂಬುವರು ಸಲ್ಲಿಸಿದ್ದ ಪುನರಾವಲೋಕನ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ, ಅರ್ಜಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿ ವಜಾಗೊಳಿಸಿದೆ. ಕಳೆದ ವರ್ಷ ಸಹ ಅರ್ಜಿ ವಜಾಗೊಳಿಸಿತ್ತು. ಇದನ್ನು ಪುನರಾವಲೋಕನಕ್ಕೆ ಮತ್ತೆ ಸಲ್ಲಿಸಿ ಸ್ವತಃ ಕೆ.ಎನ್ ಮಂಜುನಾಥ್ ವಾದ ಮಂಡಿಸಿದರು.
ಗಾಂಧೀಜಿ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ ಸಂಪುಟ 2ರ ಕುರಿತು ತಿಳಿಯಲು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸ್ಪೀಕರ್ ಓಂ ಬಿರ್ಲಾ, ರಾಜ್ಯ ಇಲಾಖೆ ಶಿಕ್ಷಣ ಇಲಾಖೆ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಗೆ ನಿರ್ದೇಶನ ನೀಡಬೇಕು ಎಂದಿದ್ದರು. ಸಂಪುಟ-2 ಅನ್ನು ಸಂಗ್ರಹಾಲಯದಿಂದ ತರಿಸಿಕೊಳ್ಳಲಾಗಿದೆ ಎಂದು ಅರ್ಜಿದಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 1925ರಲ್ಲಿ ಗಾಂಧೀಜಿಯವರ ನನ್ನ ಸತ್ಯಾನ್ವೇಷಣೆ(ಮೈ ಎಕ್ಸ್ ಪೆರಿಮೆಂಟ್ಸ್ ವಿಥ್ ಟ್ರುಥ್) ಪುಸ್ತಕ ಬಿಡುಗಡೆಯಾಗಿದೆ.




