ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಿದೆ. ವಿಜಯಪುರ, ಬಾಗಲಕೋಟೆ, ಕಲಬುರಗಿ ಭಾಗದ ರೈತರ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಅವರಿಗೆ ಪರಿಹಾರ ನೀಡುತ್ತಿಲ್ಲ. ಬೆಂಬಲ ಬೆಲೆ ಹಣ ಹಾಕುತ್ತಿಲ್ಲ. ಹೀಗಿರುವಾಗ ಸಿಂದಗಿಯ ಈಗಿನ ಶಾಸಕರು ನಮ್ಮ ಮಾಜಿ ಶಾಸಕರು ಯಾವುದೇ ಕೆಲಸ ಮಾಡಿಲ್ಲ. ಅವರ ಪಾತ್ರವಿಲ್ಲ ಎನ್ನುವಂತೆ ಮಾಡುತ್ತಿದ್ದಾರೆ. ನಮ್ಮ ಕೆಲಸಗಳಿಗೆ ಈಗಿನ ಶಾಸಕರು ಪೂಜೆ ಮಾಡುತ್ತಿದ್ದಾರೆ ಎಂದು ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಪರೋಕ್ಷವಾಗಿ ಶಾಸಕ ಅಶೋಕ ಮನಗೂಳಿಗೆ ಟಾಂಟ್ ಕೊಟ್ಟರು.
ಪಟ್ಟಣದಲ್ಲಿ ಭಾನುವಾರ ಮಾಜಿ ಶಾಸಕ ರಮೇಶ ಭೂಸನೂರ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರವೇ ನೀಡಿದ ಜಿಆರ್ ಜಿ 811, 152 ತಳಿಯ ತೊಗರಿ ಬೀಜಗಳು ಸಂಪೂರ್ಣ ವಿಫಲವಾಗಿವೆ. ಇದಕ್ಕೆ ಯಾರು ಹೊಣೆ? 12 ಸಾವಿರ ಹೆಕ್ಟೇರ್ ನಾಶವಾಗಿದೆ. ಜಿಲ್ಲಾಧಿಕಾರಿ, ಸಿಇಒಗಳ ಸಭೆ ಕರೆದು ಪರಿಹಾರ ನೀಡಬೇಕು. ಈ ಹಿಂದೆ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ನವರು ಕೇಳಿದ್ದರು. ಬೊಮ್ಮಾಯಿ ಸರ್ಕಾರ ಕೊಟ್ಟಿದೆ. ಈಗ ಇಷ್ಟೇ ಪರಿಹಾರ ರೈತರಿಗೆ ಕೊಡಲು ಹೇಳಿ ನೋಡೋಣ ಎಂದರು. ಕೇಂದ್ರದ ಜೆಜೆಎಂ ಕಾಮಗಾರಿಗೆ ಕಳಪೆ ಗುಣಮಟ್ಟದ ಪೈಪ್ ಗಳು ಸೇರಿ ಇತರೆ ವಸ್ತುಗಳನ್ನು ಪೂರೈಕೆ ಮಾಡುತ್ತಿದೆ. ಅಪ್ಪರ್ ಕೃಷ್ಣ ಯೋಜನೆ ಪೂರ್ಣಗೊಳಿಸುವ ಭರವಸೆ ಕೊಟ್ಟಿಲ್ಲ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ತುಷ್ಠೀಕರಣ ಮಾಡುತ್ತಿದೆ. ಮುಸ್ಲಿಂರು ಮಾತ್ರ ಮತ ಹಾಕಿದ್ದಾರೆ ಎನ್ನುವಂತೆ ಕಾಮಗಾರಿಯಲ್ಲಿ ಶೇಕಡ 4ರಷ್ಟು ಮೀಸಲಾತಿ, ಮದುವೆಯಾಗುವವರಿಗೆ 50 ಸಾವಿರ, ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗೆ 30 ಲಕ್ಷ ರೂಪಾಯಿ ನೀಡುತ್ತಿದೆ. ನಮ್ಮ ಸರ್ಕಾರದಲ್ಲಿ ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಿದೆ. ಕಾಂಗ್ರೆಸ್ ಪಕ್ಷ ತನ್ನ ಹೆಸರು ಬದಲಾಯಿಸಿಕೊಳ್ಳಬೇಕೆಂದು ಕಿಡಿ ಕಾರಿದರು.
ನಮ್ಮ 18 ಶಾಸಕರನ್ನು ಅಮಾನತು ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ತೋರಿಸಲಾಗಿದೆ. ಇದು ಸ್ಪೀಕರ್ ಅವರ ನಿರ್ಧಾರವೋ ಕಾಂಗ್ರೆಸ್ ಸರ್ಕಾರದ ನಿರ್ಧಾರವೋ ಹೇಳಬೇಕು. ಅಮಾನತು ಮಾಡಿರುವುದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಹನಿ ಟ್ರ್ಯಾಪ್ ಪ್ರಕರಣ ಸಿಬಿಐ ಅಥವ ಹೈಕೋರ್ಟ್ ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು. ಇದೆಲ್ಲವನ್ನು ಖಂಡಿಸಿ ರಾಜ್ಯಾದ್ಯಂತ ಮಾರ್ಚ್ 26ರಿಂದ ಒಂದು ವಾರಗಳ ಕಾಲ ಹೋರಾಟ ನಡೆಸಲಾಗುವುದು ಎಂದರು. ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ರಾಜ್ಯ ಸರ್ಕಾರ ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಕೇಂದ್ರದಿಂದ 7,550 ನೀಡಲಾಗುತ್ತಿದೆ. ರಾಜ್ಯದ 450 ರೂಪಾಯಿ ನೀಡುತ್ತಿಲ್ಲ. ಇದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದರು.
ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಬಿ.ಎಚ್ ಬಿರಾದಾರ, ರೈತ ಮೋರ್ಚಾ ಅಧ್ಯಕ್ಷ ಪೀರು ಕೆರೂರು, ಎಸ್ಟಿ ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಕಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಸಿದ್ದರಾಮ ಆಲಗೂರ, ಎಂ.ಎನ್ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.