ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ರಾಜಕೀಯದಲ್ಲಿ ಅಧಿಕಾರಿ ಶಾಶ್ವತವಲ್ಲ. ನಾವು ಮಾಡುವ ಕೆಲಸಗಳು ಶಾಶ್ವತ. ಶ್ರೀಮಂತಿಕೆಯಿದ್ದಾಗ ದಾನ ಮಾಡಬೇಕು. ವಯಸ್ಸು ಇದ್ದಾಗ ದುಡಿಬೇಕು. ಅಧಿಕಾರ ಇದ್ದಾಗ ಜನ ಸೇವೆ ಮಾಡಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಸಚಿವ ಎಂ.ಬಿ ಪಾಟೀಲ ಜನ್ಮ ದಿನದ ನಿಮಿತ್ತ ತಾಲೂಕಿನ ಗೋಲಗೇರಿಯಲ್ಲಿ ಸೋಮವಾರ ಕಾಂಗ್ರೆಸ್ ಮುಖಂಡ ಶಿವ ಹತ್ತಿ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಒಬ್ಬ ವ್ಯಕ್ತಿಯ ಹುಟ್ಟು ಹಬ್ಬವನ್ನು ಸಾರ್ವಜನಿಕ ಕಾರ್ಯಕ್ರಮವನ್ನಾಗಿ ಮಾಡಬೇಕು ಎಂದರೆ ಅವರ ಸಾಧನೆ ಇರುತ್ತೆ. ಎಂ.ಬಿ ಪಾಟೀಲರ 35 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ.
ಜನ್ಮ ದಿನದ ನಿಮಿತ್ತ ಮಾಜಿ ಸೈನಿಕರಿಗೆ, ರೈತರಿಗೆ, ಆಶಾ ಕಾರ್ಯಕರ್ತೆಯರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸನ್ಮಾನ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಕಾರ್ಯ. ಇದು ಹೀಗೆ ಮುಂದುವರೆಯಲಿ. ಸಿಂದಗಿ ತಾಲೂಕಿನ ಜನತೆ ದಿನಕ್ಕೆ ಒಂದು ಸಾರಿಯಾದರೆ ನಮ್ಮ ತಂದೆ ಎಂ.ಸಿ ಮನಗೂಳಿಯವರನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದರೆ ಅವರ ಶಾಶ್ವತ ಯೋಜನೆಗಳು ಕಾರಣ. ಇದೇ ಕಾರಣಕ್ಕೆ ಈ ಭಾಗದ ಜನರು ಮಾಜಿ ಪ್ರಧಾನಿ ದೇವೇಗೌಡರ ಹಾಗೂ ಎಂ.ಸಿ ಮನಗೂಳಿಯವರ ಕಂಚಿನ ಪ್ರತಿಮೆ ಮಾಡಿರುವುದೇ ಸಾಕ್ಷಿ ಎಂದರು.
ಆಲಮೇಲ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಾಧಿಕ್ ಸುಂಬಡ, ಜಿ.ಪಿ ಪೋರವಾಲ ಕಲಾ ವಾಣಿಜ್ಯ ಮತ್ತು ವಿ.ವಿ ಸಾಲಿಮಠ ವಿಜ್ಞಾನ ಪದವಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ.ರವಿ ಗೋಲಾ, ಗೊಲ್ಲಾಳಪ್ಪಗೌಡ ಪಾಟೀಲ ಸೇರಿ ಇತರರು ಮಾತನಾಡಿದರು. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಲ್ಲಣ್ಣ ಸಾಲಿ, ಕಾಂಗ್ರೆಸ್ ಹಿರಿಯ ಮುಖಂಡ ಶಿವಣ್ಣಗೌಡ ಪಾಟೀಲ, ಬಹುಜನ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಬ್ಯಾಕೋಡ ಸೇರಿದಂತೆ ಇತರರು ವೇದಿಕೆ ಮೇಲಿದ್ದರು. ಮಡಿವಾಳಿ ನಾಯ್ಕೋಡಿ ಸ್ವಾಗತಿಸಿದರು. ಮಹಾಂತೇಶ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಜಾಲವಾದಿ ನಿರೂಪಿಸಿದರು.