ಪ್ರಜಾಸ್ತ್ರ ಸುದ್ದಿ
ಆಲಮೇಲ(Alamela): ಪಟ್ಟಬದ್ಧ ಹಿತಾಸಕ್ತಿಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಸಂವಿಧಾನಬದ್ಧವಾಗಿ ತಳವಾರ ಜನಾಂಗದವರಿಗೆ ಸಿಕ್ಕ ಜಾತಿ ಪ್ರಮಾಣಪತ್ರವನ್ನು ತಡೆಹಿಡಿಯು ಹುನ್ನಾರ ನಡೆದಿರುತ್ತದೆ ಎಂದು ಸಮಾಜದ ಮುಖಂಡರಾದ ಪ್ರಭು ವಾಲಿಕಾರ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 17ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿಯಂದು ತಳವಾರ ಜಾತಿಯನ್ನು ಮತ್ತೆ ಪ್ರವರ್ಗ-1ರಲ್ಲಿ ಸೇರಿಸುವ ಹಾಗೂ ತಳವಾರರಿಗೆ ಅನ್ಯಾಯ ಮಾಡುವ ಕುರಿತು ಮುನ್ಸೂಚನೆ ಸಿಕ್ಕಿರುವುದರಿಂದ ಅದರ ವಿರುದ್ಧ ಪ್ರತಿಭಟಿಸುವುದು ಅನಿವಾರ್ಯವಾಗಿದೆ.
ಅಕ್ಟೋಬರ್ 14, ಸೋಮವಾರ ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮುಂಜಾನೆ 10.30ಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪುವುದು. ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಹೀಗಾಗಿ ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಾಗೂ ಗ್ರಾಮಗಳಿಂದ ತಳವಾರ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮ್ಮ ಸ್ವಾಭಿಮಾನವನ್ನು ಕೆಣಕಿದವರಿಗೆ ತಕ್ಕ ಉತ್ತರ ನೀಡಲು ಮಾಡು ಇಲ್ಲವೇ ಮಡಿ ಹೋರಾಟಕ್ಕೆ, ನಮ್ಮ ಮುಂದಿನ ಭವಿಷ್ಯಕ್ಕಾಗಿ ಕಾಲೇಜಿನ ವಿದ್ಯಾರ್ಥಿಗಳು ಯುವಕರು ಮುಖಂಡರು ಹಿರಿಯರು ಬೆಂಬಲಿಸಲು ಹಾಗೂ ಆಗಮಿಸಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳಲಾಗುತ್ತಿದೆ ಎಂದರು. ಈ ವೇಳೆ ದೌವಲಪ್ಪ ಸೊನ್ನ, ಕಲ್ಲು ಕಣಮೇಶ್ವರ, ವಿಠ್ಠಲ ಯರಗಲ್ಲ, ಸಿದ್ದರಾಯ ತಳವಾರ, ಡಾ.ಮಲ್ಲು ಪ್ಯಾಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.