ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಶುಕ್ರವಾರ ತೀರ್ಪು ನೀಡಿದೆ. ಶನಿವಾರ ಶಿಕ್ಷಯ ಪ್ರಮಾಣ ಪ್ರಕಟವಾಗಲಿದೆ. 376(2) (k), 376(2) (n), 354(a) (b) (c), 506 ಹಾಗೂ IT Act 66(e) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರಿ ಎಂದು ರುಜುವಾತಾಗಿದ್ದು, ಕೋರ್ಟ್ ಅಪರಾಧಿ ಎಂದು ಹೇಳಿದೆ.
376(2) (k), 376(2) (n) ಅಡಿಯಲ್ಲಿ ಕನಿಷ್ಠ 10 ವರ್ಷ ಹಾಗೂ ಗರಿಷ್ಠ ಜೀವಾವಧಿ ಜೈಲು ಶಿಕ್ಷೆ ಇದೆ. 354(a) (b) (c) ಅಡಿಯಲ್ಲಿ 3 ವರ್ಷ, 506 ಅಡಿಯಲ್ಲಿ 6 ತಿಂಗಳು, 201 ಬಿಎನ್ಎಸ್ ಅಡಿಯಲ್ಲಿ ಕನಿಷ್ಠ 1 ರಿಂದ 7 ವರ್ಷ ಶಿಕ್ಷೆ, 66(e) ಅಡಿಯಲ್ಲಿ 3 ವರ್ಷ ಶಿಕ್ಷೆ ವಿಧಿಸುವ ಅವಕಾಶವಿದೆ. ಹೀಗಾಗಿ ಎಲ್ಲರ ದೃಷ್ಟಿ ಕೋರ್ಟ್ ನಲ್ಲಿ ಇಂದು(ಶನಿವಾರ) ಪ್ರಮಾಣದ ಶಿಕ್ಷೆ ನೀಡಲಾಗುತ್ತೆ ಎನ್ನುವುದರ ಮೇಲಿದೆ. ಈ ಪ್ರಕರಣ ಪ್ರಸ್ತುತ ದೇವೇಗೌಡರ ಕುಟುಂಬ ಹಾಗೂ ಜೆಡಿಎಸ್ ಪಕ್ಷಕ್ಕೆ ದೊಡ್ಡ ಹೊಡೆತ ಕೊಡಲಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಈ ಪ್ರಕರಣ ಭಾರೀ ಸಂಚಲನ ಮೂಡಿಸಿತು. ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಎಲ್ಲೆಡೆ ಹರಿದಾಡಿತು. ಸಿಕ್ಕಾಪಟ್ಟೆ ವೈರಲ್ ಆಯಿತು. ಡಿಜಿಟಲ್ ದಾಖಲೆಯ ಮೂಲಕ ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಅನ್ನೋದು ಸಾಬೀತಾಗಿದೆ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಜೆಡಿಎಸ್ ಮೇಲೆ ಬಹುದೊಡ್ಡ ಹೊಡೆತ ಕೊಡಲಿದೆ. ಕೇಂದ್ರ ಸಚಿವರಾಗಿರುವ ಚಿಕ್ಕಪ್ಪ ಹೆಚ್.ಡಿ ಕುಮಾರಸ್ವಾಮಿಗೆ ಇದರಿಂದ ಇರಿಸುಮುರಿಸು ಆಗಲಿದೆ. ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ, ತಂದೆ ಮಾಜಿ ಸಚಿವ, ಶಾಸಕ ಹೆಚ್.ಡಿ ರೇವಣ್ಣ, ತಾಯಿ ಮಾಜಿ ಶಾಸಕಿ ಭವಾನಿ ರೇವಣ್ಣಗೆ ಮರ್ಮಾಘಾತವಾಗಿದೆ. 10 ವರ್ಷ ಅಥವ ಜೀವಾವಧಿವರೆಗೆ ಮಗನಿಗೆ ಶಿಕ್ಷೆಯಾದರೆ ಏನು ಅನ್ನೋದು ತಿಳಿಯದಾಗಿದೆ.
ಸಣ್ಣ ವಯಸ್ಸಿನಲ್ಲಿ ಸಂಸದನಾಗಿ ಆಯ್ಕೆ ಆಗುವ ಮೂಲಕ ಬಹುದೊಡ್ಡ ರಾಜಕೀಯ ಭವಿಷ್ಯವಿತ್ತು. ಕುಮಾರಸ್ವಾಮಿ ಪುತ್ರ ನಿಖಿಲ್ ರಂತೆ ಸಿನ್ಮಾ, ರಾಜಕೀಯ ಎನ್ನದೆ ಪೂರ್ತಿಯಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ. ರಾಜಕೀಯ, ಅಧಿಕಾರ, ಹಣ ಸೇರಿದಂತೆ ಎಲ್ಲದರಿಂದಲೂ ಬಲಾಡ್ಯರಾಗಿದ್ದ ಕುಟುಂಬ. ಆದರೆ, ಅಧಿಕಾರದ ಮದ, ವಯಸ್ಸಿನ ಆಸೆ ಮಾಡಬಾರದ ಕೆಲಸವನ್ನು ಮಾಡಿಸಿತು. ಮನುಷ್ಯತ್ವ ಮರೆತು ಮೃಗೀಯ ರೀತಿಯಲ್ಲಿ ವರ್ತಿಸಿದ ಪರಿಣಾಮ ಸುಂದರ ಬದುಕನ್ನು ಕೈಯಾರೆ ಹಾಳು ಮಾಡಿಕೊಂಡಿದ್ದು, ಜೆಡಿಎಸ್ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಎಲ್ಲಿಯೇ ಹೋದರೂ ಜನರು ಆಡಿಕೊಳ್ಳುವಂತಾಗಿದೆ. ಇಷ್ಟು ದಿನ ಆರೋಪಿ, ತೀರ್ಪು ಬಂದಿಲ್ಲವೆಂದು ಹೇಳುತ್ತಿದ್ದರು. ಈಗ ಎಲ್ಲವೂ ಬದಲಾಗಿದೆ.
ಹಾಸನ, ರಾಮನಗರ, ಮಂಡ್ಯ, ಹಳೆ ಮೈಸೂರು, ಚಾಮರಾಜನಗರ, ಕೋಲಾರ ಸೇರಿದಂತೆ ಹಲವು ಕಡೆ ಜೆಡಿಎಸ್ ಪ್ರಾಬಲ್ಯವಾಗಿತ್ತು. ಈ ಪ್ರಕರಣದಿಂದ ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಎರಡಂಕಿ ದಾಟಲು ಹರಸಾಹಸ ಪಟ್ಟಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಕೇವಲ 1ರಲ್ಲಿ ಗೆಲುವು. ಹೀಗಿರುವಾಗ ಪ್ರಜ್ವಲ್ ಪ್ರಕರಣ ಜೆಡಿಎಸ್ ಗೆ ಭಾರೀ ಹಿನ್ನಡೆ ತರಲಿದೆ. ಪಕ್ಷವನ್ನು ಗಟ್ಟಿಗೊಳಿಸಲು ಇತ್ತೀಚಗಷ್ಟೇ ಹಲವು ಪ್ಲಾನ್ ಗಳನ್ನು ನಡೆಸಲಾಗುತ್ತಿತ್ತು. ಅದೆಲ್ಲದಕ್ಕೂ ಇದು ಇತಿಶ್ರೀ ಹಾಡಿದಂತಾಗಿದೆ.