ಪ್ರಜಾಸ್ತ್ರ ಸುದ್ದಿ
ಪ್ಯಾರಿಸ್(Paris): ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಹೈಜಂಪ್ ಕ್ರೀಡಾಪಟು ಪ್ರವೀಣ್ ಕುಮಾರ್ ಚಿನ್ನದ ಸಾಧನೆ ಮಾಡಿದ್ದಾರೆ. ಈ ಹಿಂದೆ ಟೋಕಿಯೊದಲ್ಲಿ ಬೆಳ್ಳಿ ಗೆದ್ದಿದ್ದ ಪ್ರವೀಣ್ ಕುಮಾರ್ ಈಗ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. 6 ಫೈನಲಿಸ್ಟ್ ಗಳಲ್ಲಿ ಪ್ರವೀಣ್ ಕುಮಾರ್ 2.08 ಮೀಟರ್ ಎತ್ತರ ಜಿಗಿದು ಚಿನ್ನಕ್ಕೆ ಮುತ್ತಿಕ್ಕಿದರು.
21 ವರ್ಷದ ಇವರಿಗೆ ಹುಟ್ಟುವಾಗಲೇ ಕಾಲುಗಳು ಗಿಡ್ಡವಾಗಿದ್ದವು. 2023ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2021ರ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದರು. ಅಂತಿಮವಾಗಿ 2024ರಲ್ಲಿ ಚಿನ್ನ ಗೆಲ್ಲುವ ಮೂಲಕ ತಮ್ಮ ಕನಸು ನನಸು ಮಾಡಿಕೊಂಡರು. ಈ ಮೂಲಕ ಭಾರತ 26 ಪದಕಗಳನ್ನು ಇದುವರೆಗೂ ಗೆದ್ದಿದೆ. 6 ಚಿನ್ನ, 9 ಬೆಳ್ಳಿ, 11 ಕಂಚಿನ ಪದಕಗಳು ಇದರಲ್ಲಿವೆ. ಕಳೆದ ಬಾರಿ ಒಟ್ಟು 19 ಪದಕ ಜಯಿಸಿತ್ತು.