ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಜತೆಗೆ ಇದಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಶುಕ್ರವಾರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳ ಕಾಮಗಾರಿಗೆ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು, ಆಲಮಟ್ಟಿ ಆಣೆಕಟ್ಟು 524 ಮೀಟರ್‌ಗೆ ಎತ್ತರಿಸಲು ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು.
ಈ ವಿಚಾರವಾಗಿ ಶಾಸಕರ ಜತೆ ಚರ್ಚೆ ಮಾಡಿದ್ದು, ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ. ಇತ್ತೀಚೆಗೆ ನಾನು ಹಾಗೂ ಸಿಎಂ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಅಧಿಸೂಚನೆ ಹೊರಡಿಸಲು ಒತ್ತಡ ಹಾಕಿದ್ದೇವೆ. ಇದಕ್ಕಾಗಿ ಕೇಂದ್ರ ಸಚಿವರು ಸಭೆಯನ್ನು ಕರೆದಿದ್ದರು. ಆದರೆ ಕಾರಣಾಂತರಗಳಿಂದ ಅದನ್ನು ಮುಂದಕ್ಕೆ ಹಾಕಲಾಗಿದೆ ಎಂದರು. ಬಸವಣ್ಣನವರು ಹುಟ್ಟಿದ ನಾಡಿಗೆ ಬಂದು, ಇಲ್ಲಿನ ಶರಣರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಬುದ್ಧ ಪ್ರೀತಿ ಹಾಗೂ ಶಾಂತಿ ಎಂದು ಹೇಳುತ್ತಾನೆ. ದುರ್ಯೋಧನ, ಹಠ ಹಾಗೂ ಛಲ ಎಂದು ಹೇಳುತ್ತಾನೆ. ಏಕಲವ್ಯ ಮತ್ತು ಅರ್ಜುನ, ಗುರಿ ಎಂದು ಹೇಳುತ್ತಾರೆ. ಧರ್ಮರಾಯ, ಸುಧರ್ಮ ಎನ್ನುತ್ತಾನೆ. ಕೃಷ್ಣ ತಂತ್ರ ಎಂದರೆ, ಭೀಷ್ಮ ಪ್ರತಿಜ್ಞೆ ಎನ್ನುತ್ತಾನೆ. ಸಂತರು ನಮ್ಮದು ಭಕ್ತಿ ಎನ್ನುತ್ತಾರೆ. ಅಲೆಕ್ಸಾಂಡರ್ ಯುದ್ಧ ಎನ್ನುತ್ತಾನೆ. ಬಸವಣ್ಣ ಸಮಾನತೆ, ಸರ್ವರಿಗೂ ಸಮಬಾಳು, ಸಮಪಾಲು ಎಂಬ ಪ್ರತಿಪಾದನೆಯಂತೆ ನಮ್ಮ ಸರ್ಕಾರ ಸರ್ವ ಜನರ ನೋವಿಗೆ ಸ್ಪಂದಿಸುತ್ತ, ಸರ್ವರಿಗೂ ಸಮಾನ ನ್ಯಾಯ ಒದಗಿಸುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ನಮ್ಮ ಸರ್ಕಾರ ಬಸವಣ್ಣ ಅವರನ್ನು ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ ಎಂದು ಹೇಳಿದರು.
ಈ ಭಾಗದಲ್ಲಿ ಕಾರ್ಖಾನೆಗಳು ಆರಂಭವಾಗಿ, ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಕೊಲ್ಹಾರ ಪಟ್ಟಣ ಅಭಿವೃದ್ದಿಗಾಗಿ 50 ಕೋಟಿ ರೂಪಾಯಿಗಳ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು. ಜವಳಿ, ಸಕ್ಕರೆ, ಕಬ್ಬು ಅಭಿವೃದ್ದಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ, ಮಾಜಿ ಸಚಿವ ಎಸ್.ಆರ್. ಪಾಟೀಲ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮೀಜಿ ಕೊಲ್ಹಾರ ದಿಗಂಬರೇಶ್ವರ ಮಠದ ಶ್ರೀ ಯೋಗಿ ಕಲ್ಲಿನಾಥ ಸಾನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಂದಗಿ ಶಾಸಕ ಅಶೋಕ ಮನಗೂಳಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕ ಮೋಹನ ರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.