ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿನ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸೋಮವಾರ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆ ನಡೆಯಿತು. ಗ್ಯಾರಂಟಿ ಯೋಜನೆ ಮೇಲ್ವಿಚಾರಣೆ ಸಮಿತಿ ತಾಲೂಕಾಧ್ಯಕ್ಷ ಶ್ರೀಶೈಲ ಕವಲಗಿ, ತಾಲೂಕು ಪಂಚಾಯ್ತಿ ಇಓ ರಾಮು ಅಗ್ನಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಐದು ಇಲಾಖೆಗಳ ಮುಖ್ಯಸ್ಥರು ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನದ ಸದಸ್ಯರು ಭಾಗವಹಿಸಿದ್ದರು. ಸಭೆಯಲ್ಲಿ ಎಂದಿನಂತೆ ಆಹಾರ ಇಲಾಖೆಯ ವೈಫಲ್ಯದ ಕುರಿತು ಸುದೀರ್ಘ ಚರ್ಚೆ ನಡೆಯಿತು. ಗ್ಯಾರಂಟಿ ಯೋಜನೆ ಮೇಲ್ವಿಚಾರಣೆ ಸಮಿತಿ ತಾಲೂಕಾಧ್ಯಕ್ಷ ಶ್ರೀಶೈಲ ಕವಲಗಿ, ಸದಸ್ಯರು ಇಲಾಖೆಯ ಮುಖ್ಯಸ್ಥರ ಕಾರ್ಯವೈಖರಿನ್ನು ಖಂಡಿಸಿದರು.
ಅನ್ನಭಾಗ್ಯ ಯೋಜನೆ ಅಡಿ ಫಲಾನುಭವಿಗಳಿಗೆ ಸಿಗಬೇಕಾದ ಅಕ್ಕಿ ಸರಿಯಾಗಿ ಸಿಗುತ್ತಿಲ್ಲ. ನ್ಯಾಯಬೆಲೆ ಅಂಗಡಿಯವರು ಸರಿಯಾಗಿ ಪಡಿತರವನ್ನು ವಿತರಣೆ ಮಾಡುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದರೂ ತಾಲೂಕಿನ 74 ನ್ಯಾಯಬೆಲೆ ಅಂಗಡಿಯವರು ಸಭೆ ಕರೆಯುತ್ತಿಲ್ಲ ಎಂದು ಸದಸ್ಯರಾದ ರಜತ್ ತಾಂಬೆ, ಸುನಂದಾ ಯಂಪೂರೆ, ಪರಶುರಾಮ ಗೌಂಡಿ ಸೇರಿದಂತೆ ಇತರರು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲದಕ್ಕೂ ಆಹಾರ ನಿರೀಕ್ಷಿಕರಾದ ಬಿ.ಎಮ್ ಭೋವಿ ಹರಿಕೆ ಉತ್ತರ ನೀಡಿದರು. ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ನ್ಯಾಯಬೆಲೆ ಅಂಗಡಿಯವರೊಂದಿಗೆ ಸಭೆ ನಡೆಸಲು ತಹಶೀಲ್ದಾರ್ ಅವರು ಇರಬೇಕು. ಅವರೊಂದಿಗೆ ನೀವು ಮಾತನಾಡಿ ಎಂದು ಸ್ವತಃ ತಾಲೂಕು ಪಂಚಾಯ್ತಿ ಇಒ ಅವರಿಗೆ ಹೇಳಿದರು. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಪ್ರಮುಖವಾಗಿದ್ದು, ಇಲಾಖೆಯ ಬೇಜವಾಬ್ದಾರಿತನದ ಕಾರ್ಯವೈಖರಿಯಿಂದ ಅಕ್ಕಿ ದಂಧೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ನೀವು ಇದೆ ರೀತಿ ನಡೆದುಕೊಂಡರೆ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಲಾಗುವುದು ಎಂದು ಗ್ಯಾರಂಟಿ ಯೋಜನೆ ಮೇಲ್ವಿಚಾರಣೆ ಸಮಿತಿ ತಾಲೂಕಾಧ್ಯಕ್ಷ ಶ್ರೀಶೈಲ ಕವಲಗಿ ಹೇಳಿದರು.
ಗೃಹಲಕ್ಷ್ಮಿ ಯೋಜನೆಯು ಶೇಕಡ 99.98ರಷ್ಟು ಪ್ರಗತಿ ಸಾಧಿಸಿದೆ. 3 ಹೊಸ ರೇಷನ್ ಕಾರ್ಡ್, 3 ಜಿಎಸ್ ಟಿ ಹಾಗೂ 3 ಅಕೌಂಟ್ ಪ್ರಕರಣಗಳಿವೆ. ಈ ಯೋಜನೆ ಅಡಿ ತಾಲೂಕಿನಲ್ಲಿ ಚಾ ಅಂಗಡಿ, ಹೂವಿನ ಅಂಗಡಿ, ಕಿರಾಣಿ ಅಂಗಡಿ, ತರಕಾರಿ ಗಾಡಿಗಳನ್ನು ಖರೀದಿಸಿ ಸದುಪಯೋಗ ಪಡೆಸಿಕೊಂಡಿದ್ದಾರೆ ಎಂದು ಸಿಡಿಪಿಓ ಶಂಭುಲಿಂಗ ಹಿರೇಮಠ ಹೇಳಿದರು. ಗೃಹಜ್ಯೋತಿ ಯೋಜನೆ ಅಡಿಯು ತಾಲೂಕಿನಲ್ಲಿ ಶೇಕಡ 96.01ರಷ್ಟು ಪಗ್ರತಿ ಸಾಧಿಸಿದೆ. 24,242 ಮನೆಗಳಿಗೆ ಈ ಯೋಜನೆ ತಲುಪುತ್ತಿದೆ ಎಂದು ಹೆಸ್ಕಾಂ ಎಇಇ ಸಿ.ಡಿ ನಾಯಕ ಹೇಳಿದರು.
ಶಕ್ತಿ ಯೋಜನೆಯು ತಾಲೂಕಿನಲ್ಲಿ ಯಶಸ್ವಿಯಾಗಿದ್ದು, 107 ಬಸ್ ಗಳು ಸಂಚಾರ ನಡೆಸುತ್ತಿವೆ. ಡಿಸೆಂಬರ್ ತನಕ 98 ಲಕ್ಷ ಪ್ರಯಾಣಿಕರು ಸದುಪಯೋಗ ಪಡೆದಿದ್ದಾರೆ. ದಿನಕ್ಕೆ 35 ಸಾವಿರ ಜನರು ಪ್ರಯಾಣಿಸುತ್ತಿದ್ದಾರೆ. ಬೇಕಿನಾಳ ಹಾಗೂ ಉಚಿತನಾವದಗಿ ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲ ಎಂದು ಡಿಪೋ ಮ್ಯಾನೇಜರ್ ರೇವಣಸಿದ್ಧ ಖೈನೂರ ತಿಳಿಸಿದರು. ಯುವ ನಿಧಿ ಯೋಜನೆ ತಾಲೂಕಿನಲ್ಲಿ ಅತ್ಯಂತ ಹಿಂದುಳಿದಿದ್ದು, ಮಾಹಿತಿ ನೀಡುವಲ್ಲಿ ಸಹಾಯಕ ಉದ್ಯೋಗ ಅಧಿಕಾರಿ ಎಸ್.ಎಸ್ ಆಲಮೇಲ ತಡಬಡಾಯಿಸಿದರು. ಗ್ಯಾರಂಟಿ ಯೋಜನೆ ಮೇಲ್ವಿಚಾರಣೆ ಸಮಿತಿ ಸದಸ್ಯರಾದ ಎಸ್.ಬಿ ಖಾನಾಪುರ, ರವೀಂದ್ರ ನಾಟೀಕಾರ, ಮೊಹಸೀನ್ ಬೀಳಗಿ, ಶಿವಾನಂದ ಹಡಪದ, ರುದ್ರಗೌಡ ಪಾಟೀಲ, ಸಿದ್ದಲಿಂಗಪ್ಪ ಗುಂಡಾಪುರ, ಸಿದ್ರಾಮ ಕಲ್ಲೂರ, ಶರಣಗೌಡ ಬಿರಾದಾರ ಮಾತನಾಡಿದರು. ಈ ವೇಳೆ ತಾಲೂಕು ಪಂಚಾಯ್ತಿ ಸಿಬ್ಬಂದಿ ಹಾಜರಿದ್ದರು.