Ad imageAd image

ಪಟ್ಟಣದ ಸೌಂದರ್ಯ ಹಾಳು ಮಾಡುತ್ತಿರುವ ಪ್ರಚಾರದ ಫಲಕಗಳು

Nagesh Talawar
ಪಟ್ಟಣದ ಸೌಂದರ್ಯ ಹಾಳು ಮಾಡುತ್ತಿರುವ ಪ್ರಚಾರದ ಫಲಕಗಳು
WhatsApp Group Join Now
Telegram Group Join Now

ಪ್ರಜಾಸ್ತ್ರ ವಿಶೇಷ ವರದಿ

ಸಿಂದಗಿ(Sindagi): ಸಿಂದಗಿ ಪಟ್ಟಣವನ್ನು ಒಂದು ಸುತ್ತು ಹಾಕಿದರೆ ಸಾಕು ಏನೆಲ್ಲ ಸಮಸ್ಯೆಗಳಿವೆ? ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿದೆ ಅನ್ನೋದು ಕಾಣಿಸುತ್ತೆ. ಹೀಗಿರುವಾಗ ಪಟ್ಟಣದ ಸೌಂದರ್ಯ ಹಾಳು ಮಾಡುವುದರ ಜೊತೆಗೆ ಅಪಘಾತಗಳಿಗೆ ಕಾರಣವಾಗುತ್ತಿವೆ ಎಲ್ಲೆಂದರಲ್ಲಿ ಹಾಕಿರುವ ಬೃಹತ್ ಫ್ಲೆಕ್ಸ್, ಬಂಟಿಂಗ್ಸ್ ಗಳು. ಪಟ್ಟಣದ ಪ್ರಮುಖ ರಸ್ತೆಗಳ ತುಂಬೆಲ್ಲ ದೊಡ್ಡ ದೊಡ್ಡ ಫ್ಲೆಕ್ಸ್ ಗಳ ಹಾವಳಿ. ರಸ್ತೆ ವಿಭಜಕ, ವಿದ್ಯುತ್ ಕಂಬಗಳನ್ನು ಬಿಡದೆ ಬೃಹತ್ ಬೋರ್ಡ್ ಗಳನ್ನು ಹಾಕಿದ್ದಾರೆ. ಹಾಕುತ್ತಿದ್ದಾರೆ. ಇದರಿಂದಾಗಿ ರಸ್ತೆ ಸರಿಯಾಗಿ ಕಾಣಿಸದೆ ಅಪಘಾತಗಳು ಸಹ ಹೆಚ್ಚಾಗುತ್ತಿವೆ.

ಬಸವೇಶ್ವರ ವೃತ್ತ, ವಿಜಯಪುರ ರಸ್ತೆ, ತಹಶೀಲ್ದಾರ್ ಕಚೇರಿಯ ಎರಡು ಬದಿಯ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತದ ಮಾರ್ಗ, ಬಸ್ ನಿಲ್ದಾಣ ಮಾರ್ಗ, ಟಿಪ್ಪು ಸುಲ್ತಾನ್ ವೃತ್ತ, ಮೋರಟಗಿ ರಸ್ತೆ, ವಿವೇಕಾನಂದ ವೃತ್ತ ಸೇರಿದಂತೆ ಎಲ್ಲೆಲ್ಲಿ ರಸ್ತೆ ವಿಭಜಕಗಳಿವೆಯೋ ಅಲ್ಲೆಲ್ಲ ಫ್ಲೆಕ್ಸ್, ಬಂಟಿಂಗ್ಸ್ ಗಳ ಹಾವಳಿ. ಶಾಲಾ, ಕಾಲೇಜು, ಅಂಗಡಿ ಮುಂಗಟ್ಟು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಹಲವು ರೀತಿಯ ಬೃಹತ್ ಬೋರ್ಡ್ ಗಳು ವಿದ್ಯುತ್ ಕಂಬಗಳಿಗೆ, ರಸ್ತೆ ವಿಭಜಕದ ಮಧ್ಯೆ ನಿಲ್ಲಿಸಿದ್ದಾರೆ. ಭಿತ್ತಿಪತ್ರಗಳನ್ನು ರಸ್ತೆ ವಿಭಜಕಗಳಿಗೆ, ಮಹನೀಯರ ವೃತ್ತಗಳಿಗೆ ಅಂಟಿಸುತ್ತಾರೆ. ಇದರಿಂದಾಗಿ ಇಡೀ ಊರಿನ ಸೌಂದರ್ಯ ಹಾಳಾಗುತ್ತಿದೆ.

ಮಳೆಗಾಲ ಶುರುವಾಗಿದೆ. ಜೋರಾಗಿ ಗಾಳಿ, ಮಳೆಗೆ ಬೃಹತ್ ಫ್ಲೆಕ್ಸ್, ಬಂಟಿಂಗ್ಸ್ ಗಳು ರಸ್ತೆ ದಾಟುವವರ ಮೇಲೆ, ಬೈಕ್ ನಲ್ಲಿ ಹೋಗುವವರ ಮೇಲೆ, ಇತರೆ ವಾಹನಗಳ ಮೇಲೆ ಬಿದ್ದರೆ ಅನಾಹುತ ಸಂಭವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಪರವಾನಿಗೆ ಇಲ್ಲದೆ ಫ್ಲೆಕ್ಸ್, ಬಂಟಿಂಗ್ಸ್ ಹಾಕಲು ಬರುವುದಿಲ್ಲ. ಆದರೆ, ಇದೆಲ್ಲವನ್ನು ನೋಡಿಕೊಂಡು ಪುರಸಭೆ ಅದ್ಹೇಗೆ ಕಣ್ಣುಮುಚ್ಚಿಕೊಂಡು ಕುಳಿತಿದೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಪಟ್ಟಣದ ಹಲವು ಮಾರ್ಗಗಳಲ್ಲಿ ರಸ್ತೆ ವಿಭಜಕ ನಿರ್ಮಿಸಲಾಗುತ್ತಿದೆ. ಹೊಸದಾಗಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಅವುಗಳ ಸೌಂದರ್ಯವನ್ನು ಸಹ ಫ್ಲೆಕ್ಸ್ ಗಳು ತಿಂದು ಹಾಕುತ್ತಿವೆ. ಕೂಡಲೇ ಪುರಸಭೆ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಫ್ಲೆಕ್ಸ್, ಬಂಟಿಂಗ್ಸ್ ಗಳನ್ನು, ರಸ್ತೆ ವಿಭಜಕ ಮಧ್ಯೆ ಅಳವಿಡಿಸಿರುವ ಕಬ್ಬಿಣದ ಬೋರ್ಡ್ ಗಳನ್ನು ತೆಗೆದು ಹಾಕುವ ಮೂಲಕ ಪಟ್ಟಣದ ಸೌಂದರ್ಯದ ಜೊತೆಗೆ ಜನರ ಜೀವವನ್ನು ಕಾಪಾಡಬೇಕು ಅನ್ನೋದು ಸಾರ್ವಜನಿಕರ ಮಾತಾಗಿದೆ.

WhatsApp Group Join Now
Telegram Group Join Now
Share This Article