ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ(Bagalakote): ನಮ್ಮ ಪಾಕಿಸ್ತಾನ ಎಂದು ಹೇಳಿಕೆ ನೀಡಿರುವ ಜಮಖಂಡಿಯ ಬಿಜೆಪಿ ಶಾಸಕ ಜಗದೀಶ ಗುಡಗುಂಟಿ ವಿರುದ್ಧ ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಶಾಸಕ ಜಗದೀಶ ಗುಡಗುಂಟಿ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ದೂರು ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡರು, ಸಾರ್ವಜನಿಕ ಸಮಾರಂಭದಲ್ಲಿ ‘ನಮ್ಮ ಪಾಕಿಸ್ತಾನ’ ವೆಂದು ಸಂಬೋಧಿಸಿ ಭಾಷಣ ಮಾಡಿದ್ದನ್ನು ವಿರೋಧಿಸಿ ಇಂದು ಬಾಗಲಕೋಟೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆಯನ್ನು ಮಾಡಲಾಗಿದೆ. ಶಾಸಕ ಜಗದೀಶ ಗುಡಗುಂಟಿ ಅವರಿಗೆ ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಹೋಗಿ ಅವರು ಪಾಕಿಸ್ತಾನದಲ್ಲಿ ನೆಲೆಸಲಿ. ತಕ್ಷಣವೇ ಅವರು ಈ ಭಾರತ ದೇಶದ ಜನತೆಗೆ ಕ್ಷಮೆ ಕೇಳಬೇಕು ಮತ್ತು ಬಿಜೆಪಿ ಪಕ್ಷಕ್ಕೆ ಭಾರತ ದೇಶದ ಮೇಲೆ ಗೌರವ ಪ್ರೀತಿ, ದೇಶಪ್ರೇಮ ಇರೋದೇ ಸತ್ಯವಾದರೆ ಶಾಸಕ ಜಗದೀಶ್ ಗುಂಡಗುಂಟಿ ಅವರನ್ನ ತಕ್ಷಣ ಬಿಜೆಪಿ ಪಕ್ಷದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.




