ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಆಲಮೇಲ ತಾಲೂಕಿನ ಕೋರಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನೇಮಕದಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಬಹುಜನ ದಲಿತ ಸಂಘರ್ಷ ಸಮಿತಿ ವಿಜಯಪು ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಶೈಲ ಜಾಲವಾದಿ ಅವರ ನೇತೃತ್ವದಲ್ಲಿ ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕೋರಹಳ್ಳಿ ಗ್ರಾಮದ ಕಾರ್ಯಕರ್ತೆಯ ಹುದ್ದೆಗೆ ಅದೇ ಗ್ರಾಮವನ್ನು ಬಿಟ್ಟು ತಾಲೂಕಿನ ಉಳಿದ ಹಳ್ಳಿಗಳ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಾರ್ಯಕರ್ತೆಯರು ಅಕ್ಟೋಬರ್ 10ರಂದು ಹಾಜರಿರುತ್ತಾರೆ. ಆದರೆ, ಸುಳ್ಳು ದಾಖಲಾತಿ ಸೃಷ್ಟಿಸುವ ಸಲುವಾಗಿ ಹಾಜರಾತಿ ಪುಸ್ತಕದಲ್ಲಿನ ಅಕ್ಟೋಬರ್ ತಿಂಗಳ ಪ್ರತಿ ಹರಿದು ಅಕ್ಟೋಬರ್ 1ರಿಂದ 10ರ ತನಕ ಅನಧಿಕೃತ ಹಾಜರಾತಿ ಸಹಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ಹಾಗೂ ಕಚೇರಿಯ ಮೇಲ್ವಿಚಾರಕರು ಭಾಗಿಯಾಗಿದ್ದಾರೆ. ಇವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಪ್ರದೀಪಕುಮಾರ್ ಹಿರೇಮಠ ಅವರ ಮೂಲಕ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಡಿಎಸ್ಎಸ್ ಜಿಲ್ಲಾ ಸಂಚಾಲಕ ಧರ್ಮಣ್ಣ ಯಂಟಮಾನ, ತಾಲೂಕು ಸಂಚಾಲಕ ಶ್ರೀನಿವಾಸ ಓಲೇಕಾರ, ಬಿಡಿಎಸ್ಎಸ್ ದೇವರ ಹಿಪ್ಪರಗಿ ಘಟಕದ ಕನಮಡಿ, ದಾದಾ ತಾಂಬೋಳಿ ಹಾಗೂ ರಾಜು ಹೊಸಮನಿ, ಅಮರ.ಎಸ್ ಅಳಗಿ, ಶ್ರೀಶೈಲ ಹೊಸಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.