ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ಸಂದರ್ಭದಲ್ಲಿ ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಲಾಯಿತು. ವಿವಿಧ ಲಿಂಗಾಯತ ಸಂಘಟನೆಗಳ ಮುಖಂಡರು, ಸದಸ್ಯರು ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದಕ್ಕೂ ಮೊದಲು ಕನ್ನಡ ಸಾಹಿತ್ಯ ಭವನದಲ್ಲಿ ಸೇರಿದಾಗ ಯತ್ನಾಳ ಪ್ರತಿಕೃತಿ ದಹಿಸಲು ಮುಂದಾದರು. ಇದಕ್ಕೆ ಪೊಲೀಸರು ಅವಕಾಶ ನೀಡದೆ ಹೋದಾಗ ವಾಗ್ವಾದ ನಡೆಯಿತು. ಕೊನೆಗೆ ಪ್ರತಿಕೃತಿ ದಹಿಸಿದರು.
ಬೀದರನ ಬಸವಪೀಠದ ಸತ್ಯಕ್ಕ ಮಾತಾಜಿ ಮಾತನಾಡಿ, ಯತ್ನಾಳವರನ್ನು ಇನ್ನು ಮುಂದೆ ಲಿಂಗಾಯತ ಧರ್ಮದ ಶಾಸಕನೆಂದು ಯಾರೂ ಕರೆಯಬಾರದು. ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ಮೊದಲು ಬಿಡಬೇಕು. ವಚನ ಸಾಹಿತ್ಯವನ್ನು ಮೊದಲು ಓದಬೇಕು. ಬಸವಣ್ಣನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅವರು ಹೊಳೆಗೆ ಹಾರಿದ್ದಾರೆ ಎನ್ನುವುದಕ್ಕೆ ಪುರಾವೆ ನೀಡಬೇಕು. ಇಲ್ಲವಾದರೆ ಅವರು ತಮ್ಮ ನಾಲಿಗೆ ಕತ್ತರಿಸಿಕೊಳ್ಳಬೇಕು ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ, ಬಸವ ಕಾಯಕ ಜೀವಿಗಳ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಯತ್ನಾಳ್ ಅವರನ್ನು ಶಾಸಕ ಸ್ಥಾನದನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಜಿಲ್ಲಾಧಿಕಾರ ಮೂಲಕ ಸಭಾಪತಿಗೆ ಮನವಿ ಸಲ್ಲಿಸಿದರು.