ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆಯಲ್ಲಿ ಸರ್ಕಾರದ ವಿಳಂಬ ನೀತಿ ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್, ವಿದ್ಯಾರ್ಥಿಗಳ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಯುತ್ತಾ ಬಂದರೂ ಸರ್ಕಾರ ಇಲ್ಲಿಯವರೆಗೂ ಲ್ಯಾಪ್‌ಟಾಪ್ ವಿತರಣೆ ಮಾಡುತ್ತಿಲ್ಲ. ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನದ ಜೊತೆಗೆ ತಂತ್ರಜ್ಞಾನದ ಜ್ಞಾನವು ತುಂಬಾ ಅಗತ್ಯವಾಗಿದೆ. ಆಗಲೇ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡದೇ ವಂಚಿಸುತ್ತಿದ್ದು ಖಂಡನೀಯವಾಗಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಮಹಾದೇವ ಚಲವಾದಿ, ಮುಖಂಡರಾದ ಸಂದೇಶ ಕುಮುಟಗಿ, ಪ್ರಶಾಂತ್ ದಾಂಡೇಕರ್, ಯಾಷಿನ್ ಇನಾಮದಾರ್, ಯಮನೂರಿ ಮಾದರ, ಸಾಗರ್ ಕಲಕೇರಿ, ಸಿದ್ದು, ಪ್ರವೀಣ್, ಸಂತೋಷ್, ಹಣಮಂತ್, ಸೌಮ್ಯ ಜುಮದಿ, ಲಕ್ಷ್ಮಿ ಸಾತಿಹಾಳ, ಲಕ್ಷ್ಮಿ ಹಂಡಿಗಿ, ಪ್ರೇಮಾ ಚಲವಾದಿ, ಲಕ್ಷ್ಮಿ ಬನ್ನೂರ್, ಐಶ್ವರ್ಯ ಅತರ್ಗ, ಅಕ್ಷತಾ ಭೇಣ, ಶ್ರೀನಾಥ್ ಪವಾರ, ಗಿರೀಶ್ ಇಜೀರಿ, ಸಚಿನ್ ರಾಠೋಡ ಸೇರಿ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.