ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸಿಂದಗಿ ಪೋಲಿಸ ಠಾಣೆ ಇವುಗಳ ಸಹಯೋಗದಲ್ಲಿ ಪಟ್ಟಣದ ಎಚ್. ಜಿ.ಪದವಿ ಪೂರ್ವ ವಿದ್ಯಾಲಯದಲ್ಲಿ ಸೋಮವಾರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಸಿಂದಗಿ ಠಾಣೆ ಪಿಎಸ್ಐ ಆರಿಫ್ ಮುಷಾಪುರಿ ಅವರು ಮಾತನಾಡಿ, ಸೈಬರ್ ಅಪರಾಧ, ರಸ್ತೆ ಸುರಕ್ಷತೆ, ಮಹಿಳೆ ಮತ್ತು ಮಕ್ಕಳ ರಕ್ಷಣೆ ಸೇರಿ ಮುಂತಾದ ಅಪರಾಧಗಳ ನಿಯಂತ್ರಣ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಪಟ್ಟಣದ ನಿವಾಸಿಗಳು ಮನೆಗೆ ಬೀಗ ಹಾಕಿ ಬೇರೆಡೆಗೆ ಹೋಗುವಾಗ ಪೊಲೀಸ್ ಠಾಣೆಗೆ ಲಿಖಿತ ಪತ್ರದೊಂದಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಗೃಹ ರಕ್ಷಕ ತಂತ್ರಾಂಶದಲ್ಲಿ ನಿಮ್ಮ ಮನೆಯಿರುವ ಸ್ಥಳದ ಮಾಹಿತಿಯನ್ನು ಸೇರ್ಪಡೆ ಮಾಡಬೇಕು. ಆಗ ಪೊಲೀಸ್ ಗಸ್ತು ನೀಡಲಾಗುವುದು. ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೇ ಹೆಲ್ಮಟ್ ಧರಿಸಿ. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಅಪಾಯ ಕಡಿಮೆಯಾಗುತ್ತದೆ. ಸಮಾಜದ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸನ್ನದ್ಧವಾಗಿದೆ. ವಿದ್ಯಾರ್ಥಿಗಳು ತಮ್ಮ ಶಾಲಾ- ಕಾಲೇಜುಗಳ ಬಳಿ ಯಾರಾದರೂ ಅಪರಿಚಿತರು ಕಂಡುಬಂದ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ಬಲವಂತವಾಗಿ ಮಾತನಾಡಲು ಯತ್ನಿಸಿದರೆ ಕೂಡಲೇ ನಿಮ್ಮ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಡ್ರಗ್ಸ್ ಸೇರಿದಂತೆ ಮಾಧಕ ವಸ್ತುಗಳ ಬಗ್ಗೆಯೂ ಸಾಕಷ್ಟು ಎಚ್ಚರಿಕೆವಹಿಸಬೇಕು. ಯಾರಾದರೂ ಅಂತಹ ವಸ್ತುಗಳನ್ನು ನೀಡುವುದು ಕಂಡುಬಂದರೂ ತಕ್ಷಣ ನಿಮ್ಮ ಶಿಕ್ಷಕರು ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇಂದಿನ ವಿದ್ಯಾರ್ಥಿಗಳು ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ ಅವುಗಳ ಬಳಕೆ ಕಡಿಮೆಯಾಗಿ ಓದಿನ ಕಡೆ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಉಪನ್ಯಾಸಕರಾದ ಎಸ್.ಎ.ಪಾಟೀಲ, ಆರ್.ಬಿ. ಹೊಸಮನಿ ಉಪಸ್ಥಿತರಿದ್ದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.