ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ. ಹೊಸ ಸರ್ಕಾರ ರಚನೆಯಾಗುತ್ತೆ ಎನ್ನುವ ಮಾತುಗಳು ಕಳೆದ ಹಲವು ತಿಂಗಳುಗಳಿಂದ ಕೇಳುತ್ತಾ ಬರುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ರಚನೆಯಾಗಿ 2 ವರ್ಷಗಳ ಹತ್ತಿರ ಬಂದಿದೆ. ಈಗ ಮತ್ತೆ ಸಿಎಂ ಬದಲಾವಣೆ ಹಾಗೂ ಹೊಸ ಸರ್ಕಾರ ರಚನೆ ಚರ್ಚೆ ಶುರುವಾಗಿದೆ. ಈ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರು ಹಾಗೂ ಶಾಸಕರಿಗೆ ಔತಣಕೂಟ ಕೊಟ್ಟ ಮೇಲೆ ಹೊಸ ಸರ್ಕಾರ ರಚನೆಯಾಗುತ್ತೆ ಎಂದು ಹೇಳಿದ್ದಾರೆ.
ಸಚಿವರಾದ ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್ ಹೀಗೆ ಒಬ್ಬರಾದ ಮೇಲೆ ಒಬ್ಬರು ಔತಣಕೂಟ ಏರ್ಪಡಿಸುತ್ತಿದ್ದಾರೆ. ನಾಳೆ ಗೃಹ ಸಚಿವರು ದಲಿತ ಹಾಗೂ ಪರಿಶಿಷ್ಟ ಪಂಗಡದ ಸಚಿವರಿಗೆ ಡಿನ್ನರ್ ಪಾರ್ಟಿ ಉದ್ದೇಶ ನಿರ್ಗಮದ ಪಾರ್ಟಿ ಎಂದು ಕಾಲೆಳೆದರು. ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕು ಎಂದು ಸದನದಲ್ಲಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಅದು ಯಾರಿಗೆ ಹೇಳಬೇಕೋ ಅವರಿಗೆ ಹೇಳಿದ್ದಾರೆ. ಸಿಎಂ ಔತಣಕೊಟ ಆಪ್ತರಿಗೆ ಕೊಡಿಸಿದ್ದಾರೆ. ನಾಳೆ ಪರಮೇಶ್ವರ್, ನಾಡಿದ್ದು ಸತೀಶ್ ಜಾರಕಿಹೊಳಿ. ಡಿ.ಕೆ ಶಿವಕುಮಾರ್ ಕೊಡಿಸಿದ ಬಳಿಕ ಹೊಸ ಸರ್ಕಾರ ರಚನೆಯಾಗುತ್ತೆ ಎಂದು ವ್ಯಂಗ್ಯವಾಡಿದರು.
ಅಭಿವೃದ್ಧಿಗೆ ಹಣವಿಲ್ಲ ಎಂದು ಕಾಂಗ್ರೆಸ್ ನಾಯಕರೆ ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಅಭಿವೃದ್ಧಿ ನಿಂತಿಲ್ಲ. ಶೇಕಡ 40ರಿಂದ 60ಕ್ಕೆ ಕಮಿಷನ್ ಹೆಚ್ಚು ಮಾಡಿಕೊಂಡಿದ್ದಾರೆ. ಬಾಣಂತಿಯರು, ಗುತ್ತಿಗೆದಾರರು, ರೈತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿವೆ. ಮಾತ್ತೆತ್ತಿದರೆ ಸಂವಿಧಾನ ಹಿಡಿದುಕೊಳ್ಳುತ್ತಾರೆ. ಇದೇ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು 2 ಬಾರಿ ಸೋಲಿಸಿದೆ. ಅಂತ್ಯಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನಾವು 100 ಕೋಟಿ ಕೊಟ್ಟಿದ್ದೇವೆ. ಇವರು 45 ಕೋಟಿ ಕೊಟ್ಟಿದ್ದಾರೆ. ದೇವರಾಜು ಅರಸು ನಿಗಮಕ್ಕೆ ನಾವು 165 ಕೋಟಿ ಕೊಟ್ಟರೆ ಇವರು 106 ಕೋಟಿ ಕೊಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಜೆಪಿ 106 ಕೋಟಿ ಕೊಟ್ಟರೆ ಇವರು 66 ಕೋಟಿ ಕೊಟ್ಟಿದ್ದಾರೆ ಎಂದು ಪಟ್ಟಿ ಮಾಡುತ್ತಾ ವಾಗ್ದಾಳಿ ನಡೆಸಿದರು.