ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ಯಾದಗಿರಿ(Yadagiri) ನಗರ ಠಾಣೆ ಪಿಎಸ್ಐ ಪರುಶುರಾಮ್ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್(R.Ashok) ಆಗ್ರಹಿಸಿದರು. ಭಾನುವಾರ ಕೊಪ್ಪಳದ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿರುವ ಅವರ ತಂದೆ, ತಾಯಿಯನ್ನು ಭೇಟಿ ಮಾಡಿದ ಅವರು ಸಾಂತ್ವಾನ ಹೇಳಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಅಧಿಕಾರಿಗಳು ಸಾವಾಗುತ್ತಿವೆ. ಪರಶುರಾಮ್ ಸಾವಿನ ವಿಚಾರದಲ್ಲಿ ಪೊಲೀಸರು(Police) ನಡೆದುಕೊಂಡ ರೀತಿ ಬೇಸರ ಮೂಡಿಸಿದೆ. ನಮ್ಮ ಕ್ಷೇತ್ರದಲ್ಲಿ ದಲಿತರು ಇರಬಾರದು ಎಂದು ಶಾಸಕರು ಹೇಳಿದ್ದಾರೆ ಎಂದು ಪರಶುರಾಮ್ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಾವು ಬದುಕುತ್ತಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ಬೇಸರ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ(CBI) ವಹಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಾಜಿ ಸಚಿವರಾದ ಹಾಲಪ್ಪ ಆಚಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ, ವಿಧಾನಸಭಾ ವಿರೋಧಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್.ಪಾಟೀಲ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.