ಪ್ರಜಾಸ್ತ್ರ ಸುದ್ದಿ
ಯಲ್ಲಾಪುರ(Yallapura): ಶನಿವಾರ ಪಟ್ಟಣದಲ್ಲಿ ಹಾಡಹಗಲೇ ರಂಜಿತಾ ಬನ್ಡೋಡೆ(30) ಅನ್ನೋ ಮಹಿಳೆಯನ್ನು ಚಾಕುವಿನಿಂದ ಇರಿದು ರಫೀಕ್ ಯಳ್ಳೂರು ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದ. ಭಾನುವಾರ ಈತ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹತ್ಯೆಯ ಬಳಿಕ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎಸ್ಪಿ ದೀಪನ್ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದರು.
ಕೊಲೆಯಾದ ರಂಜಿತಾ 12 ವರ್ಷಗಳ ಹಿಂದೆ ಸೊಲ್ಲಾಪ್ಪುರದ ಸಚೀನ್ ಕಾಟೇರ್ ಎಂಬಾತನನ್ನು ಮದುವೆಯಾಗಿದ್ದರು. ಇವರಿಗೆ ಮಗು ಜನಿಸಿ ಐದು ವರ್ಷದ ಬಳಿಕ ಸಂಸಾರದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ವಿಚ್ಛೇದನ ಪಡೆದಿದ್ದರು. ರಾಮಾಪುರದ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ರಂಜಿತಾ ಹಾಗೂ ರಫೀಕ್ ಒಟ್ಟಿಗೆ ಓದಿದ್ದರು. ಹೀಗಾಗಿ ಪರಿಚಯವಿತ್ತು. ರಂಜಿತಾ ವಿಚ್ಛೇದನ ಬಳಿಕ ಆಕೆಗೆ ಹತ್ತಿರವಾಗಲು ನೋಡಿದ್ದ. ಪ್ರೀತಿಸುವಂತೆ ಪೀಡಿಸುತ್ತಿದ್ದ ಅನ್ನೋ ಆರೋಪವಿದೆ. ಆದರೆ, ಶನಿವಾರ ಕಾಳಮ್ಮನಗರದಲ್ಲಿ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ.
ಗಾಯಗೊಂಡಿದ್ದ ರಂಜಿತಾಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯ ಕೊನೆಯುಸಿರೆಳೆದಿದ್ದಾಳೆ. ಯಲ್ಲಾಪುರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದ ಹಿಂದೂಪರ ಸಂಘಟನೆಗಳ ಮುಖಂಡರು ಆರೋಪಿ ರಫೀಕ್ ಬಂಧನಕ್ಕೆ ಆಗ್ರಹಿಸಿದ್ದರು. ಇಂದು ಯಲ್ಲಾಪುರ ಬಂದ್ ಗೆ ಕರೆ ನೀಡಿದ್ದರು.




