ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಉದ್ಯಮಿ ಗೌತಮ್ ಅದಾನಿ ವಿರುದ್ಧ ಕೇಳಿ ಬಂದಿರುವ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಸಂಸತ್ ಮುಂದೆ ಪ್ರತಿಭಟನೆ ನಡೆಸುತ್ತಿವೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಅದರಲ್ಲೂ ಪ್ರಧಾನಿ ಮೋದಿ ಹಾಗೂ ಉದ್ಯಮಿ ಅದಾನಿ ಒಂದೇ ಎಂದು ಕಿಡಿ ಕಾರಲಾಗುತ್ತಿದೆ. ಮೊನ್ನೆ ಮೋದಿ ಅದಾನಿ ಏಕ್ ಹೇ ಎನ್ನುವ ಟೀ ಶರ್ಟ್ ಹಾಕಿಕೊಂಡು ಪ್ರತಿಭಟಿಸಲಾಯಿತು. ಇಂದು ಮೋದಿ-ಅದಾನಿಯ ಅಣುಕು ಸಂದರ್ಶನ ನಡೆಸಲಾಗಿದೆ.
ಕಾಂಗ್ರೆಸ್ ನ ಇಬ್ಬರು ನಾಯಕರಿಗೆ ಮೋದಿ, ಅದಾನಿ ಮುಖವಾಡ ಧರಿಸಲಾಗಿದೆ. ಇವರನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂದರ್ಶನ ಮಾಡುತ್ತಿರುವಂತೆ ಅಣುಕು ಮಾಡಲಾಗಿದೆ. ಸಂಸತ್ ಕಲಾಪ ಸರಿಯಾಗಿ ನಡೆಯಲು ಯಾಕೆ ಬಿಡುತ್ತಿಲ್ಲವೆಂದು ಪ್ರಶ್ನಿಸುತ್ತಾರೆ. ಅದಕ್ಕೆ ಅದಾನಿ ಮುಖವಾಡದ ನಾಯಕ, ನಾವು ಅಮಿತ್ ಬಾಯ್ ಕೇಳಬೇಕು. ಅವರು ಕಾಣೆಯಾಗಿದ್ದಾರೆ ಎಂದು ಉತ್ತರಿಸುತ್ತಾರೆ.
ಮೋದಿ, ಅದಾನಿ ನಡುವಿನ ಸಂಬಂಧದ ಬಗ್ಗೆ ಕೇಳಿದಾಗ ನಾವಿಬ್ಬರೂ ಒಂದೇ. ನಾನು ಹೇಳುವದೆಲ್ಲ ಮಾಡುತ್ತಾರೆ. ಅದು ವಿಮಾನ ನಿಲ್ದಾಣವೇ ಇರಲಿ, ಬೇರೆ ಏನೇ ಇದ್ದರೂ ಎನ್ನುತ್ತಾರೆ. ಮೋದಿ ಯಾಕೆ ಮಾತನಾಡುತ್ತಿಲ್ಲವೆಂದು ಕೇಳಿದರೆ ಅವರು ಇತ್ತೀಚೆಗೆ ಒತ್ತಡದಲ್ಲಿದ್ದಾರೆ ಎಂದು ಅದಾನಿ ಮುಖವಾಡದ ನಾಯಕ ಹೇಳುತ್ತಾರೆ. ಹೀಗೆ ಹಲವು ಪ್ರಶ್ನೆಗಳನ್ನು ಕೇಳುವುದು, ಅದಕ್ಕೆ ಅವರು ಉತ್ತರಿಸುವ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.