ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿ ವಿವಿಧ ತಾಲೂಕುಗಳಲ್ಲಿ ಸುಮಾರು 5 ಗಂಟೆಗಳ ಕಾಲ ಮಳೆಯಾಗಿದೆ ಎಂದು ತಿಳಿದು ಬಂದಿದೆ. ನಗರದಲ್ಲಿ ರಾತ್ರಿ 8 ಗಂಟೆಗೆ ಮಳೆ ಸುರಿಯಲು ಪ್ರಾರಂಭಿಸಿದೆ. ರಹೀಂ ನಗರ, ಶಾಲಿ ನಗರ, ಕನ್ನಾನ್ ನಗರ, ನೆಹರೂ ನಗರ, ಭಾಗವಾನ್ ಕಾಲೋನಿ ಸೇರಿದಂತೆ ಅನೇಕ ಕಡೆ ವ್ಯಾಪಕ ಮಳೆಯಾಗಿದೆ. ಹೀಗೆ ಮನೆಗಳು, ಅಂಗಡಿಗಳು ಜಲಾವೃತಗೊಂಡಿವೆ.
ಇನ್ನು ಜಿಲ್ಲೆಯ ಮುದ್ದೇಬಿಹಾಳ, ತಿಕೋಟಾ, ಬಸವನ ಬಾಗೇವಾಡಿ, ನಿಡಗುಂದಿ, ನಾಲತವಾಡ, ಸಿಂದಗಿ, ದೇವರ ಹಿಪ್ಪರಗಿ ಭಾಗದಲ್ಲಿ ತಡರಾತ್ರಿಯೂ ಮಳೆಯಾಗಿದೆ. ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿನ ಸಂಗಮನಾಥ ದೇವಸ್ಥಾನ ಜಲಾವೃತಗೊಂಡಿದೆ. ಬಸವನ ಬಾಗೇವಾಡಿಯ ದಿಂಡವಾರದಲ್ಲಿ 78 ಎಂಎಂ, ತಿಕೋಟಾದ ಸಿದ್ದಾಪುರದಲ್ಲಿ 75 ಎಂಎಂ, ಘನಸೊಗಿಯಲ್ಲಿ 68 ಎಂಎಂ, ಇಟಗಿ ಹೋಬಳಿಯಲ್ಲಿ 77 ಎಂಎಂ, ಮುದ್ದೇಬಿಹಾಳದ ಬಸರಕೋಡದಲ್ಲಿ 64.5 ಎಂಎಂ, ಮುದ್ದೇಬಿಹಾಳ ಹೋಬಳಿಯಲ್ಲಿ 77 ಎಂಎಂ, ಆಲಮಟ್ಟಿಯಲ್ಲಿ 67 ಎಂಎಂ ಮಳೆಯಾಗಿದೆ.