ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಮಸಾಜ್ ಪಾರ್ಲರ್ ನಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಹತ್ತಿರ ಇರುವ ಕಲರ್ಸ್ ಹೆಸರಿನ ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಲಾಗಿದೆ. ರಾಮ ಸೇನೆಯ ಕಾರ್ಯಕರ್ತರು ದಾಳಿ ಅಲ್ಲಿದ್ದ ವಸ್ತುಗಳನ್ನು ಒಡೆದು ಹಾಕಿ, ಮಹಿಳಾ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಇದರ ವಿಡಿಯೋ ರೆಕಾರ್ಡ್ ಮಾಡಿ ಬಿಡುಗಡೆ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ ಈ ಒಂದು ದಾಳಿ ನಡೆದಿದೆ.
ಮಸಾಜ್ ಸೆಂಟರ್ ನಲ್ಲಿ ಡ್ರಗ್ಸ್ ನೀಡಿ ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ. 16, 17 ವರ್ಷದ ಹುಡುಗಿಯರನ್ನು ಇದರಲ್ಲಿ ಬಳಸಿಕೊಳ್ಳಲಾಗುತ್ತಿದೆ. ನಮ್ಮ ಕಾರ್ಯಕರ್ತರೊಬ್ಬರ ಸಂಬಂಧಿ ಇದರಲ್ಲಿ ಸಿಲುಕಿದ್ದಾಳೆ ಎಂದು ರಾಮ ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಹೇಳಿದ್ದಾರೆ. ಪಾರ್ಲರ್ ನಲ್ಲಿದ್ದ ಬಹುತೇಕ ವಸ್ತುಗಳನ್ನು ಹಾನಿ ಮಾಡಿದ್ದಾರೆ. ಈ ವೇಳೆ ಮಹಿಳಾ ಸಿಬ್ಬಂದಿ ಕೈ ಮುಗಿದು ಕಣ್ಣೀರು ಹಾಕುತ್ತಾ ಬೇಡಿಕೊಳ್ಳುವ ದೃಶ್ಯಗಳಿವೆ. ನಮ್ಮಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲವೆಂದು ಮಸಾಜ್ ಸೆಂಟರ್ ಮಾಲೀಕರು ಹೇಳುತ್ತಿದ್ದಾರೆ. ಉಡುಪಿಯಲ್ಲಿಯೇ ಇದ್ದ ಗೃಹ ಸಚಿವ ಜಿ.ಪರಮೇಶ್ವರ್ ಈ ಬಗ್ಗೆ ಮಾತನಾಡಿದ್ದು, ಅಕ್ರಮ ಚಟುವಟಿಕೆ ನಡೆಯುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ದಾಳಿ ಯಾಕೆ ಮಾಡಬೇಕಿತ್ತು. ಆರೋಪಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದಿದ್ದಾರೆ.