ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ತವರು ಅಂಗಳದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಪ್ಲಾನ್ ಅನ್ನು ಬೌಲರ್ ಗಳು ಯಶಸ್ವಿಗೊಳಿಸಿದರು. ಆರಂಭದಲ್ಲಿ ಕೊಹ್ಲಿ, ಸಾಲ್ಟ್ ದೊಡ್ಡ ಆಟವಾಡಿದರು. ಆದರೆ, ಸಾಲು ಸಾಲು ವಿಕೆಟ್ ಬೀಳುತ್ತಲೇ ಹೋದ ಪರಿಣಾಮ ಬಿಗ್ ಸ್ಕೋರ್ ಬರಲೇ ಇಲ್ಲ. 3.1 ಓವರ್ ಗಳಲ್ಲಿಯೇ ಕೊಹ್ಲಿ, ಸಾಲ್ಟ್ ಜೋಡಿ 61 ರನ್ ಚಚ್ಚಿದರು. ಸಾಲ್ಟ್ ರನ್ ಔಟ್ ಆದ ಬಳಿಕ ವಿಕೆಟ್ ಪತನ ಶುರುವಾಯಿತು.
ಸಾಲ್ಟ್ 37, ಕೊಹ್ಲಿ 22, ಪಡಿಕಲ್ ಸತತ ವೈಫಲ್ಯ ಎದುರಿಸಿದ್ದು 1 ರನ್ ಗೆ ಔಟ್ ಆದರು. ನಾಯಕ ಪಟೀದಾರ್ 25, ಲಿವಿಂಗ್ ಸ್ಟನ್ 4, ಜಿತೇಶ್ ಶರ್ಮಾ 3, ಕೃನಾಲ್ ಪಾಂಡ್ಯೆ 18 ರನ್ ಗಳಿಸಿದರು. ಕೊನೆಯಲ್ಲಿ ಟಿಮ್ ಡೇವಿಡ್ 4 ಸಿಕ್ಸ್, 2 ಫೋರ್ ಗಳೊಂದಿಗೆ ಅಜೇಯ 37 ರನ್ ಗಳಿಸಿದರು. ಹೀಗಾಗಿ ಸ್ಕೋರ್ 160 ದಾಟಿತು. ಭುವನೇಶ್ವರ್ ಕುಮಾರ್ ಅಜೇಯ 1 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಬಂದಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ವಿಪ್ರಜಾ 2, ಕುಲ್ದೀಪ್ ಯಾದವ್ 2, ಮುಕೇಶ್ ಕುಮಾರ್, ಮೋಹಿತ್ ಶರ್ಮಾ ತಲಾ 1 ವಿಕೆಟ್ ಪಡೆದರು.
164 ರನ್ ಗಳ ಗುರಿ ಬೆನ್ನು ಹತ್ತಿದ ಡೆಲ್ಲಿ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದು ಯಶ್ ದಯಾಳ್. ಫಾಪ್ ಡುಪ್ಲಸಿ ಅನ್ನು 2 ರನ್ ಗೆ ಔಟ್ ಮಾಡಿದರು. ಮುಂದೆ 8.4 ಓವರ್ ಗಳಲ್ಲಿ 58 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಕನ್ನಡಿಗ ಕೆ.ಎಲ್ ರಾಹುಲ್ ಒಂದು ಕಡೆ ನಿಂತು ಭರ್ಜರಿ ಬ್ಯಾಟ್ ಬೀಸಿದರು. ಸ್ಟಬ್ಸ್ ಸಹ ಸಾಥ್ ನೀಡಿದರು. 6 ಸಿಕ್ಸ್, 7 ಫೋರ್ ಗಳೊಂದಿಗೆ 53 ಬೌಲ್ ಗಳಲ್ಲಿ ಅಜೇಯ 93 ರನ್ ಗಳಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಸ್ಟಬ್ಸ್ ಅಜೇಯ 38 ರನ್ ಗಳಿಸಿದರು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಓಟ ಮುಂದುವರೆಸಿತು.