ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪ್ಯಾರಾ ಒಲಿಂಪಿಕ್ಸ್(paralympics), ಪ್ಯಾರಾ ಏಷಯನ್ ಗೇಮ್ಸ್, ಪ್ಯಾರಾ ಕಾಮನ್ ವೆಲ್ತ್ ಗೇಮ್(para commonwealth games) ಗಳಲ್ಲಿ ಸಾಧನೆ ಮಾಡಿದ 12 ಸಾಧಕರಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಕ್ರೀಡಾ ಸಾಧಕರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 2016-17ರಲ್ಲಿ ಹುಬ್ಬಳ್ಳಿಯಲ್ಲಿ ಒಲಿಂಪಿಕ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಕ್ರೀಡಾಕೂಟದ ವೇಳೆ ಒಲಿಂಪಿಕ್ಸ್, ಏಷ್ಯಾಡ್, ಕಾಮನ್ ವೆಲ್ತ್ ಟೂರ್ನಿಯಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಸರ್ಕಾರಿ(Govt Job) ನೌಕರಿ ನೀಡುವುದಾಗಿ ಘೋಷಣೆ ಮಾಡಿದ್ದೆ. ಮುಂದೆ ಸರ್ಕಾರ ಬದಲಾಗಿ ಅದು ನೆನೆಗುದಿಗೆ ಬಿದ್ದಿತ್ತು. ಈಗ ಅದಕ್ಕೆ ಚಾಲನೆ ನೀಡಲಾಗಿದೆ ಎಂದರು.
ನೇಮಕಾತಿಗಾಗಿ ಕ್ರೀಡಾ ಸಾಧಕರಿಂದ ಆನ್ಲೈನ್(Online) ಮೂಲಕ ಅರ್ಜಿ ಕರೆಯಲಾಗಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಸಮಿತಿಯು ಅವರನ್ನು ಆಯ್ಕೆ ಮಾಡಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದೀರಿ. ನಿಮ್ಮ ಸಾಧನೆ ಗುರುತಿಸಿ ಪ್ರೋತ್ಸಾಹ ನೀಡುವುದು ಸರ್ಕಾರದ ಜವಾಬ್ದಾರಿ ಅಂತಾ ಹೇಳಿದರು.