ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ತಾಳಿಕೋಟೆ ತಾಲೂಕಿನ ವ್ಯಾಪ್ತಿಗೆ ಒಳಪಡುವ ಪೀರಾಪೂರ-ಬೂದಿಹಾಳ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲು ಕೊರತೆಯಾಗಿರುವ 170 ಕೋಟಿ ರೂಪಾಯಿ ಮೊತ್ತದ ಎಫ್ಐಸಿ ಟೆಂಡರ್ ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲರಿಂದ ಅನುಮೋದನೆ ಕೊಡಿಸುವಂತೆ ಈ ಭಾಗದ ರೈತರು, ಸಾರ್ವಜನಿಕರು ಧ್ವನಿ ಎತ್ತಿದ್ದಾರೆ. ಈ ಸಂಬಂಧ ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಅವರಿಗೆ ಅಸ್ಕಿ, ನೀರಲಗಿ ಸೇರಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಪ್ರಗತಿಪರ ರೈತರು ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಶಾಸಕರನ್ನು ಭೇಟಿಯಾದ ರೈತರು, ಅಂತರ್ಜಲಮಟ್ಟ ಈ ಭಾಗದಲ್ಲಿ ತುಂಬಾ ಶೋಚನೀಯವಾಗಿದೆ. ಹೀಗಾಗಿ ಪೀರಾಪೂರ-ಬೂದಿಹಾಳ ಏತ ನೀರಾವರಿ ಯೋಜನೆ ಬೇಗ ಪೂರ್ಣಗೊಂಡರೆ ಈ ಭಾಗದ 38 ಗ್ರಾಮಗಳ 50,657 ಎಕರೆ ಭೂಮಿಗೆ ನೀರಿನ ಸೌಲಭ್ಯ ಸಿಗಲಿದೆ. ಈಗಾಗ್ಲೇ 1,140 ಕೋಟಿ ಮೊತ್ತದ ಕಾಮಗಾರಿಯಾಗಿದೆ. ಬಾಕಿ ಮೊತ್ತ ಬಿಡುಗಡೆಯಾಗಿ ಈ ಬೇಸಿಗೆಯಲ್ಲಿ ಕಾಮಗಾರಿ ಪೂರ್ಣಗೊಂಡರೆ, ರೈತರ ಬದುಕಿಗೆ ಆಸರೆಯಾಗಲಿದೆ ಎಂದು ಮನವಿ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನು ಜಿಲ್ಲಾ ಉಸ್ತುವರಿ ಸಚಿವರಾದ ಎಂ.ಬಿ ಪಾಟೀಲ ಅವರಿಗೆ ಜನವರಿ 25ರ ಮುಂಜಾನೆ 10 ಗಂಟೆಗೆ ಮನವಿ ಕೊಡುವ ಸಂದರ್ಭದಲ್ಲಿ ಈ ಯೋಜನೆಯ ವ್ಯಾಪ್ತಿಗೆ ಬರುವ 38 ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟನಾಕಾರರಾದ ಗುರುರಾಜ ಎಂ.ಪಡಶೆಟ್ಟಿ(ಅಸ್ಕಿ), ಶಿವಪುತ್ರ ಚೌಧರಿ(ನೀರಲಗಿ), ಶಿವಾನಂದ ಮಾಡಗಿ(ತಿಳಗೂಳ) ಇವರು ಮನವಿ ಮಾಡಿದ್ದಾರೆ.