ಪ್ರಜಾಸ್ತ್ರ ಸುದ್ದಿ
ಸಿಂದಗಿ: ಸರ್ಕಾರದ ಪಂಚ ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೆ ತರುವಲ್ಲಿ ಹಾಗೂ ನೂರಕ್ಕೆ ನೂರರಷ್ಟು ಫಲಿತಾಂಶ ಕೊಡುವಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೇಲ್ವಿಚಾರಣೆ ಸಮಿತಿ ತಾಲೂಕಾಧ್ಯಕ್ಷ ಶ್ರೀಶೈಲ ಕವಲಗಿ ಹೇಳಿದರು. ಮಂಗಳವಾರ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಕೆವೈಸಿ ಸೇರಿದಂತೆ ತಾಂತ್ರಿಕ ಸಮಸ್ಯೆಗಳನ್ನು ಸಮಸ್ಯೆಗಳನ್ನು ಬಗೆಹರಿಸಿ ಫಲಾನುಭವಿಗಳು ಲಾಭ ಸಿಗುವಂತೆ ಮಾಡಬೇಕು ಎಂದು ಹೇಳಿದರು.
ಸಿಂದಗಿ ತಾಲೂಕಿನಲ್ಲಿ 37,166 ರೇಷನ್ ಕಾರ್ಡ್ ಗಳಲ್ಲಿ 36,915ರಷ್ಟು ಫಲಾನುಭವಿಗಳಿದ್ದು, 252 ಪ್ರಕರಣಗಳು ಬಾಕಿ ಇವೆ. 45 ಜಿಎಸ್ ಟಿ ಕಾರಣಗಳಿವೆ. ಶೇಕಡ 99.99ರಷ್ಟು ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿದೆ ಎಂದು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶಂಭುಲಿಂಗ ಹಿರೇಮಠ ಹೇಳಿದರು. ಶಕ್ತಿ ಯೋಜನೆಯಡಿಯಲ್ಲಿ ಸಿಂದಗಿ ಘಟಕದ ವ್ಯಾಪ್ತಿಯಲ್ಲಿ 95,93,796 ಮಹಿಳೆಯರು ಪ್ರಯಾಣಿಸಿದ್ದು, 35 ಕೋಟಿ 40 ಲಕ್ಷದ 18 ಸಾವಿರ ರೂಪಾಯಿಗಳ ಆದಾಯ ಬಂದಿದೆ ಎಂದು ಬಸ್ ಡಿಪೋ ಅಕೌಂಟ್ ಸೂಪರ್ ವೈಸರ್ ಸಂತೋಷ್ ಆರ್.ಹೆಚ್ ಹೇಳಿದರು. ಈ ವೇಳೆ ಗ್ಯಾರಂಟಿ ಯೋಜನೆಯ ಸದಸ್ಯ ರಜತ್ ತಾಂಬೆ ಮಾತನಾಡಿ, ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಸೌಜನ್ಯದಿಂದ ಮಾತನಾಡುತ್ತಿಲ್ಲ. ಈ ಬಗ್ಗೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದರು.
ಇನ್ನು ಆಹಾರ ಇಲಾಖೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದವು. ನ್ಯಾಯಬೆಲೆ ಅಂಗಡಿಗಳಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಮೇಲ್ವಿಚಾರಣೆ ಸಮಿತಿ ತಾಲೂಕು ಸದಸ್ಯರಾದ ಸುನಂದಾ ಯಂಪುರೆ, ರಜತ್ ತಾಂಬೆ, ಸಾಹೇಬಪಟೇಲ ಅವಟಿ ಹೇಳಿದರು. ತೂಕದಲ್ಲಿ ಮೋಸ, ಚೀಟಿ ಬರೆದು ಕೊಡುವುದು, ಗಣಕಯಂತ್ರದ ತೂಕ ಇಲ್ಲದೆ ಇರುವುದು ಹಾಗೂ ಅಕ್ಕಿ ಮಾಫಿಯಾ ಬಗ್ಗೆ ಹೇಳುವ ಮೂಲಕ ಆಹಾರ ಇಲಾಖೆಯ ಅಧಿಕಾರಿ ವಿದ್ಯಾ.ಎಂ ಹಿಪ್ಪರಗಿ ಅವರಿಗೆ ಪ್ರಶ್ನಿಸಿದರು. ಅವರು ಎಲ್ಲದಕ್ಕೂ ಹರಿಕೆ ಉತ್ತರವೆಂಬಂತೆ ನನ್ನ ನಜರ್ ಗೆ ಬಂದಿಲ್ಲ. ಹಾಗೇನಾದರೂ ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು. ಇದರಿಂದಾಗಿ ಸದಸ್ಯರು ಮುಗಿಬಿದ್ದು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟ ಪ್ರಸಂಗ ನಡೆಯಿತು.
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಮೀಟರ ಅಳವಡಿಕೆಯಿಂದ ಯುನಿಟ್ ಬಳಕೆ ಹೆಚ್ಚಿಗೆ ತೋರಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದವು. ಅದರ ತಾಂತ್ರಿಕ ಸಮಸ್ಯೆ ಬಗೆ ಹರಿಸುವ ಕುರಿತು ಹೆಸ್ಕಾಂ ಅಧಿಕಾರಿಗೆ ತಿಳಿಸಲಾಐಇತು. ಯುವ ನಿಧಿ ಯೋಜನೆ ಕುರಿತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹಾಯಕ ಅಧಿಕಾರಿ ಸೋಮಶೇಖರ ಆಲಮೇಲ ಮಾಹಿತಿ ನೀಡಿದರು. ಈ ವೇಳೆ ತಾಲೂಕು ಪಂಚಾಯ್ತಿ ಇಒ ರಾಮು ಜಿ.ಅಗ್ನಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಮೇಲ್ವಿಚಾರಣೆ ಸಮಿತಿ ತಾಲೂಕು ಸದಸ್ಯರಾದ ಶರಣಬಸಪ್ಪ ಖಾನಾಪುರ, ಮೊಹಸಿನ್ ಬೀಳಗಿ, ರುದ್ರಗೌಡ ಪಾಟೀಲ, ಪರಶುರಾಮ ಗೌಂಡಿ, ಸಿದ್ದಲಿಂಗಪ್ಪ ಗುಂಡಾಪುರ, ಸಿದ್ರಾಮಪ್ಪ ಕಲ್ಲೂರ, ತಾಲೂಕು ಪಂಚಾಯ್ತಿ ಸಿಬ್ಬಂದಿ ಭೀಮರಾಯ ಚೌಧರಿ ಸೇರಿ ಇತರರು ಹಾಜರಿದ್ದರು.