ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಡಿಸೆಂಬರ್ 5ರಂದು ಮಹಾರಾಷ್ಟ್ರದಲ್ಲಿ ಮಹಾಯತಿ ಮೈತ್ರಿಕೂಟದ ಸರ್ಕಾರ ರಚನೆಯಾಗಿದೆ. ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಶಿವಸೇನೆಯ ಏಕನಾಥ್ ಶಿಂದೆ ಹಾಗೂ ಎನ್ ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಡಿಸೆಂಬರ್ 15 ಭಾನುವಾರ ರಾತ್ರಿ ಸಚಿವ ಸಂಪುಟ ರಚನೆಯಾಗಿದೆ. ಈ ವೇಳೆ ಏಕನಾಥ್ ಶಿಂದೆ ಬಣದ ಶಿವಸೇನೆಯ ಶಾಸಕ ನರೇಂದ್ರ ಬೋಂಧೇಕರ್ ಗೆ ಸಚಿವ ಸ್ಥಾನ ಸಿಕ್ಕಿಲ್ಲ. ಮಂತ್ರಿಗಿರಿ ಆಕಾಂಕ್ಷಿಯಾಗಿದ್ದ ನರೇಂದ್ರ ಬೋಂಧೇಕರ್ ಗೆ ನಿರಾಸೆಯಾಗಿದ್ದು, ಪಕ್ಷದ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂರು ಬಾರಿ ಶಾಸಕರಾಗಿರುವ ಬೋಂಧೇಕರ್ 2024ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಪೂಜಾ ಗಣೇಶ್ ವಿರುದ್ಧ 38,367 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈ ಬಾರಿ ಸಚಿವ ಸ್ಥಾನ ಸಿಗುತ್ತೆ ಎಂದುಕೊಂಡಿದ್ದರು. ಆದರೆ, ಸಿಕ್ಕಿಲ್ಲ. ಹೀಗಾಗಿ ಏಕನಾಥ್ ಶಿಂದೆ ಬಣದ ಶಿವಸೇನೆಯ ಉಪ ನಾಯಕ, ವಿದರ್ಭ ಭಾಗದ ಸಂಯೋಜಕ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಶಾಸಕ ಸ್ಥಾನಕ್ಕೆ ಅಲ್ಲ. ಇನ್ನು ಉದಯ್ ಸಾಮಂತ್, ಶ್ರೀಕಾಂತ್ ಶಿಂದೆ ಸಹ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರಂತೆ. ಅಜಿತ್ ಪವಾರ್ ಬಣದ ಎನ್ ಸಿಪಿ(41 ಶಾಸಕರು) ಹಾಗೂ ಏಕಾನಥ್ ಶಿಂದೆ ಬಣದ ಶಿವಸೇನೆಯ(57 ಶಾಸಕರು) ತಲಾ 10 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ.