ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿನ ಕೇಂದ್ರ ಬಸ್(Bus Stand) ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜಾಗ ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡಲಾಗುತ್ತಿದೆ. ಇದನ್ನು ತೆರವುಗೊಳಿಸುವ ಕೆಲಸ ಪುರಸಭೆಯಿಂದ ಭರ್ಜರಿಯಾಗಿ ನಡೆದಿದೆ. ಪೊಲೀಸರ ನೆರವಿನೊಂದಿಗೆ ಪುರಸಭೆ(Municipal) ಮುಖ್ಯಾಧಿಕಾರಿ, ಸಿಬ್ಬಂದಿ ರಸ್ತೆ ಒತ್ತುವರಿ ಮಾಡಿಕೊಂಡು ಇಟ್ಟಿರುವ ಅಂಗಡಿಗಳನ್ನು, ತಳ್ಳು ಗಾಡಿಗಳನ್ನು ತೆಗೆಸುವ ಕೆಲಸ ನಡೆದಿದೆ.
ಇತ್ತೀಚೆಗೆ ಜಿಲ್ಲಾಧಿಕಾರಿ(DC) ಟಿ.ಭೂಬಾಲನ್ ಅವರು ತಾಲೂಕಿನ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದೆ ರೀತಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವ ಪ್ರದೇಶವನ್ನು ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ಸೂಚಿಸಿದರು. ಹೀಗಾಗಿ ಪಿಎಸ್ಐ(PSI) ಆರೀಫ್ ಮುಶಾಪೀರ್ ಹಾಗೂ ಸಿಬ್ಬಂದಿ ನೆರವಿನೊಂದಿಗೆ ಅತಿಕ್ರಮಿಸಿಕೊಂಡಿರುವ ಜಾಗವನ್ನು ತೆರವುಗೊಳಿಸುವ ಕೆಲಸ ನಡೆದಿದೆ.
ಈ ತೆರವುಗೊಳಿಸುವ ಕೆಲಸ ಬರೀ ಸಣ್ಣಪುಟ್ಟ ಅಂಗಡಿಕಾರರು, ತಳ್ಳುಗಾಡಿಯ ಜನರ ಮೇಲೆ ಮಾತ್ರ ಮಾಡಿದರೆ ಸಾಲದು, ಅನೇಕ ಕಡೆ ಸಮಾಜದಲ್ಲಿ ದೊಡ್ಡ ದೊಡ್ಡವರು ಎನಿಸಿಕೊಂಡವರಿಂದಲೂ ಒತ್ತುವರಿಯಾಗಿದೆ(Occupy) ಅದೆಲ್ಲವೂ ತೆರವುಗೊಳಿಸುವ ಕೆಲಸವಾಗಬೇಕು. ಅಲ್ಲದೆ ಇದು ಬರೀ ಎರಡ್ಮೂರು ದಿನಗಳ ಕಾಲ ಮಾಡಿ ಬಿಟ್ಟು ಬಿಡುವುದಲ್ಲ. ಮೇಲಾಧಿಕಾರಿಗಳ, ಜನಪ್ರತಿನಿಧಿಗಳ ಒತ್ತಡಕ್ಕೆ ಒಳಗಾಗಿ ಅರ್ಧಕ್ಕೆ ನಿಲ್ಲಿಸಬಾರದು ಅನ್ನೋ ಮಾತುಗಳು ಬದಲಾವಣೆ ಬಯಸುವ ಸಾರ್ವಜನಿಕರಿಂದ ಕೇಳಿ ಬಂದಿವೆ.