ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕಳೆದ ಹಲವು ದಿನಗಳಿಂದ ವಿಜಯಪುರ ಜಿಲ್ಲೆಯಾದ್ಯಂತ ದರೋಡೆಕೋರರು(Robbers), ಕಳ್ಳರ(Thieves)ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಜನರು ಆತಂಕದಲ್ಲಿದ್ದಾರೆ. ಇದರ ನಡುವೆ ಕಳ್ಳರ ಉಪಟಳ ಈಗ ತಾಲೂಕುಗಳಲ್ಲಿ ಶುರುವಾಗಿದೆ. ಕಳೆದ ಎರಡ್ಮೂರು ದಿನಗಳಲ್ಲಿ ಸಿಂದಗಿ ಭಾಗದಲ್ಲಿ ಕಳ್ಳತನ ನಡೆದಿದೆ ಎಂದು ಸಾರ್ವಜನಿಕರು(Public) ಮಾತನಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಈ ಬಗ್ಗೆ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಿಂದಗಿ ಪಟ್ಟಣದ ವಿದ್ಯಾನಗರ, ಕಲ್ಯಾಣ ನಗರ, ವಿಜಯಪುರ ರಸ್ತೆಯಲ್ಲಿನ ಬಡವಾಣೆಗಳಲ್ಲಿ ಕಳ್ಳತನ ನಡೆದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೆಲವೊಂದು ವಾಟ್ಸಪ್(WhatsApp) ಗ್ರೂಪ್ ಗಳಲ್ಲಿಯೂ ಕಳ್ಳತನದ ಸಂದೇಶ ಹರಿದಾಡುತ್ತಿವೆ. ನೆರೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ಬರುವ ಕಾಮನಕೇರಿ ಗ್ರಾಮದಲ್ಲಿ ಸುಮಾರು 15 ಜನರ ತಂಡ ಕಳ್ಳತನಕ್ಕೆ ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕಳೆದ ರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದು, ಜನರು ಎಚ್ಚೆತ್ತಾಗ ಪರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ರೀತಿ ಸಿಂದಗಿ ಭಾಗದಲ್ಲಿಯೂ ಕಳ್ಳರ ಹಾವಳಿ ಶುರುವಾಗಿದ್ದು, ಜನರು ಹಗಲು ಹಾಗೂ ರಾತ್ರಿ ಹೊತ್ತಿನಲ್ಲಿಯೂ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು(Police) ಈ ಸಂಬಂಧ ಹೆಚ್ಚಿನ ನಿಗಾ ವಹಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.