ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಇಲ್ಲಿನ ವಾಂಖಡೆ ಸ್ಟೇಡಿಯಂನಲ್ಲಿ ಸೋಮವಾರ ಸಂಜೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಗೆದ್ದು ಬೀಗಿದೆ. ಸಿಎಸ್ಕೆ ನೀಡಿದ್ದ 177 ರನ್ ಗಳ ಗುರಿಯನ್ನು ಕೇವಲ 15.4 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 9 ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದಕ್ಕೆ ರೋಹಿತ್ ಶರ್ಮಾ ಅಬ್ಬರದ ಅಜೇಯ 76 ರನ್ ಕಾರಣವಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಕಿಕ್ ನೀಡಿದ್ದಾರೆ.
ಟಾಸ್ ಗೆದ್ದ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯೆ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಸಿಎಸ್ಕೆ ಮೊದಲು ಬ್ಯಾಟ್ ಮಾಡಿತು. ಆಲ್ ರೌಂಡರ್ ಜಡೇಜಾ 53, ಇಂಪ್ಯಾಕ್ಟ್ ಪ್ಲೇಯರ್ ಶಿವಂ ದುಬೆ 50 ರನ್ ಗಳಿಂದ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲು ಸಾಧ್ಯವಾಯಿತು. ಉಳಿದವರು ಒಂದಂಕಿ ಕೂಡ ದಾಟಲು ಒದ್ದಾಡಿದರು. ನಾಯಕ ಧೋನಿ ವೈಫಲ್ಯ ಮುಂದುವರೆದಿದ್ದು ಕೇವಲ 4 ರನ್ ಗೆ ಔಟ್ ಆದರು. 177 ರನ್ ಗಳ ಗುರಿ ಬೆನ್ನು ಹತ್ತಿದ್ದ ಮುಂಬೈ ತಂಡ ಶುರುವಿನಿಂದಲೇ ಅಬ್ಬರಿಸಿತು. ರೆಯಾನ್, ರೋಹಿತ್ ಜೋಡಿ 6.4 ಓವರ್ ಗಳಿಗೆ 63 ರನ್ ಗಳಿಸಿತು. ರೆಯಾನ್ 24 ರನ್ ಗೆ ಔಟ್ ಆದರು.
ಮುಂದೆ ರೋಹಿತ್ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ಚೆನ್ನೈ ಬೌಲರ್ ಗಳನ್ನು ಬೆಂಡೆತ್ತಿದ್ದರು. ಇಂಪ್ಯಾಕ್ಟ್ ಪ್ಲೇಯರ್ ರೋಹಿತ್ ಶರ್ಮಾ ಅಜೇಯ 76 ರನ್(6 ಸಿಕ್ಸ್, 4 ಫೋರ್) ಹಾಗೂ ಸೂರ್ಯಕುಮಾರ್ ಯಾದವ್ ಅಜೇಯ 68 (5 ಸಿಕ್ಸ್, 6 ಫೋರ್) ರನ್ ಗಳಿಂದಾಗಿ 15.4 ಓವರ್ ಗಳಲ್ಲಿ ಗುರಿ ಮುಟ್ಟಿ ಮುಂಬೈ ಗೆಲುವಿನ ನಗೆ ಬೀರಿತು. ಮುಂಬೈ 8ರಲ್ಲಿ 4 ಗೆಲುವು ಸಾಧಿಸಿ 8 ಪಾಯಿಂಟ್ ನೊಂದಿಗೆ 6ನೇ ಸ್ಥಾನ, ಚೆನ್ನೈ 8 ಪಂದ್ಯಗಳಲ್ಲಿ 6ರಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ.