ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಹೊರ ಭಾಗದಲ್ಲಿ ರೌಡಿ ಶೀಟರ್ ವೊಬ್ಬನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ದೇವಣಗಾಂವ್ ಗ್ರಾಮದ ಯುನಸ್ ಪಟೇಲ್ ಎಂಬಾತ ಪೊಲೀಸರ ಗುಂಡಿಗೆ ಬಲಿಯಾದ ರೌಡಿ ಶೀಟರ್ ಎಂದು ತಿಳಿದು ಬಂದಿದೆ. ಈತ ವಿಜಯಪುರದಲ್ಲಿ 25 ಸಾವಿರ ದರೋಡೆ ಮಾಡಿ ಚಾಕು ತೋರಿಸಿ ವ್ಯಕ್ತಿಯೊಬ್ಬನ ಸ್ಕೂಟಿ ಪಡೆದು ಪರಾರಿಯಾಗಿದ್ದನಂತೆ. ಈ ಬಗ್ಗೆ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸ್ವಗ್ರಾಮ ದೇವಣಗಾಂವದತ್ತ ಹೊರಟಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಲು ಹೋದಾಗ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ನೋಡಿದ್ದಾನೆ. ಆಗ ವಿಜಯಪುರ ಗ್ರಾಮೀಣ ಠಾಣೆ ಸಿಪಿಐ ಪ್ರದೀಪ್ ತಳಕೇರಿ ಅವರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಎಚ್ಚರಿಕೆ ನೀಡಿದ್ದಾರೆ. ಆದರೂ ಕೇಳದೆ ಹಲ್ಲೆಗೆ ಮುಂದಾಗಿದ್ದಾನೆ. ಆಗ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಮೃತಪಟ್ಟಿದ್ದಾನೆ. ಇತನ ವಿರುದ್ಧ ಕೊಲೆ, ಕೊಲೆ ಯತ್ನ ಸೇರಿದಂತೆ 12 ಪ್ರಕರಣಗಳಿವೆ ಎಂದು ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ ಅವರು ಮಾಹಿತಿ ನೀಡಿದ್ದಾರೆ.