ಪ್ರಜಾಸ್ತ್ರ ಸುದ್ದಿ
ಗುವಹಾಟಿ(Guwahati): ಶುಕ್ರವಾರ ರಾತ್ರಿ ನಡೆದ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಆರ್ ಆರ್ ಭರ್ಜರಿ ಗೆಲುವು ಸಾಧಿಸಿದೆ. 6 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಅಜೇಯ ಓಟ ಮುಂದುವರೆಸಿದೆ. ರಾಜಸ್ತಾನ್ ರಾಯಲ್ಸ್ ಪಡೆಯ ಯುವ ಆಟಗಾರರ ಅಬ್ಬರಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಣಿದಿದೆ.
ಆರ್ ಸಿಬಿ ನೀಡಿದ 202 ರನ್ ಗಳ ಗುರಿಯನ್ನು ಆರ್ ಆರ್ 18 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿದೆ. ಇದರಲ್ಲಿ ವೈಭವ ಸೂರ್ಯವಂಶಿ 26 ಬೌಲ್ ಗಳಲ್ಲಿ 78 ರನ್, ಧ್ರುವ್ ಜುರೇಲ್ 43 ಬೌಲ್ ಗಳಲ್ಲಿ ಅಜೇಯ 81 ಹಾಗೂ ಜಡೇಜಾ ಅಜೇಯ 21 ರನ್ ಗಳಿಂದಾಗಿ ವಿಜಯದ ಪತಾಕೆ ಹಾರಿಸಿತು. ಬೆಂಗಳೂರು ಪರ ಕುನಾಲ್ ಪಾಂಡೆ ಹಾಗೂ ಹೆಝಲ್ ವುಡ್ ತಲಾ 2 ವಿಕೆಟ್ ಪಡೆದರು.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಆರಂಭಿಕ ಆಟಗಾರ ಸಾಲ್ಟ್ ಡಕೌಟ್ ಆದರು. ಪಡಿಕಲ್ 14 ರನ್, ಕೊಹ್ಲಿ 32, ಜಿತೇಶ್ ಶರ್ಮಾ 5, ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ಟಿಮ್ ಹೆಡ್ 13 ರನ್ ಗಳಿಸಿ ಫೇಲ್ ಆದರು. ನಾಯಕ ಪಟೀದಾರ್ ಏಕಾಂಗಿ ಹೋರಾಟ ನಡೆಸಿ 63 ರನ್ ಗಳಿಸಿದರು. ಆರ್ ಆರ್ ಪರ ಆರ್ಚರ್, ಬ್ರಿಜೇಶ್ ಶರ್ಮಾ, ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರು. ಸಂದೀಪ ಶರ್ಮಾ, ಜಡೇಜಾ ತಲಾ 1 ವಿಕೆಟ್ ಪಡೆದರು. ವೈಭವ ಸೂರ್ಯವಂಶಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




