ಪ್ರಜಾಸ್ತ್ರ ಸುದ್ದಿ
ಚಿಟಗುಪ್ಪ(Chitaguppa): ಕಲ್ಯಾಣ ಕರ್ನಾಟಕದ ಸಮಗ್ರ ವಿಕಾಸಕ್ಕಾಗಿ ಹಮ್ಮಿಕೊಂಡ ಕಾರ್ಯಕ್ರಮವೇ ಭಾರತೀಯ ಸಂಸ್ಕೃತಿ ಉತ್ಸವ ಎಂದು ಸೇಡಂನ ಸದಾಶಿವ ಸ್ವಾಮೀಜಿಗಳು ಹೇಳಿದರು. ತಾಲೂಕಿನ ಕಂದಗೋಳ ಗ್ರಾಮದ ಚನ್ನಬಸವ ಪಟ್ಟದ್ದೇವರು ಗುರುಕುಲ ಆವರಣದಲ್ಲಿ ತಾಲೂಕು ವಿಕಾಸ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ವಿಕಾಸ ಪಥ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯದಲ್ಲಿ ವಹಿಸಿ ಮಾತನಾಡಿದ ಅವರು, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯು ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು ಎಂಬ ಉದಾತ್ತ ಸಂಕಲ್ಪದೊಂದಿಗೆ ಕಳೆದ ಐವತ್ತು ವರ್ಷಗಳಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ಕೈಗೊಳ್ಳುವುದರ ಜೊತೆಗೆ ಕಲ್ಯಾಣ ಕರ್ನಾಟಕ ನಾಡಿನಾದ್ಯಂತ ಸಮಾಜ ಸೇವಾ ಕೈಂಕರ್ಯಗಳನ್ನು ಸಹೃದಯ ಜನತೆಗೆ ತಲುಪಿಸುವ ಕಾರ್ಯದಲ್ಲಿ ಮಗ್ನವಾಗಿದೆ ಎಂದರು.
ಸಂಸ್ಥೆಯ 51ನೇ ವರ್ಷದಲ್ಲಿ ಪಾದಾರ್ಪಣೆಗೊಂಡು ಸುವರ್ಣ ಮಹೋತ್ಸವದೆಡೆಗೆ ಸಾಗುತ್ತಿದೆ. ನಿಮಿತ್ತ 7ನೇ ಭಾರತೀಯ ಸಂಸ್ಕೃತಿ ಉತ್ಸವ ಎಂಬ ಬೃಹತ್ ಐತಿಹಾಸಿಕ ಕಾರ್ಯಕ್ರಮವು ಸೇಡಂ ತಾಲೂಕಿನ ಪ್ರಕೃತಿ ನಗರದಲ್ಲಿ ಜನವರಿ 29, 2025 ರಿಂದ ಫೆಬ್ರವರಿ 6, 2025ವರೆಗೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸರ್ವರೂ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಜಿಲ್ಲಾ ವಿಕಾಸ ಅಕಾಡೆಮಿ ಸಂಚಾಲಕರಾದ ರೇವಣ್ಣಸಿದ್ದಪ್ಪ ಜಲಾದೆ ಮಾತನಾಡಿ, ಒಂಭತ್ತು ದಿನಗಳ ಕಾಲ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಜಿಲ್ಲೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಉಪಯೋಗವನ್ನು ಪಡೆದುಕೊಂಡು ಈ ಭಾಗದ ವಿಕಾಸಕ್ಕಾಗಿ ಎಲ್ಲರೂ ದುಡಿಯಲು ಮುಂದಾಗಬೇಕೆಂದು ತಿಳಿಸಿದರು.
ತಾಲೂಕು ವಿಕಾಸ ಅಕಾಡೆಮಿ ಸಂಚಾಲಕರಾದ ಸಂಗಮೇಶ ಎನ್.ಜವಾದಿ ಮಾತನಾಡಿ, ಯುವ ಶಕ್ತಿ, ಶಿಕ್ಷಣ, ಪರಿಸರ, ಕೃಷಿ, ದೇಶಭಕ್ತಿ, ಸ್ವಾಭಿಮಾನ ಇತ್ಯಾದಿ ವಿಷಯಗಳ ಮೇಲೆ ಚಿಂತನಾ ಸಮಾವೇಶಗಳು ನಡೆಯುತ್ತವೆ. ನಮ್ಮ ತಾಲೂಕಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು. ಚಿಟಗುಪ್ಪ ವೃತ್ತ ನಿರೀಕ್ಷಕರಾದ ಶ್ರೀನಿವಾಸ ಅಲ್ಲಾಪೂರೆ ಮಾತನಾಡಿ, ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿಗಳು ಕಲ್ಯಾಣ ಕರ್ನಾಟಕದ ಜಿಲ್ಲಾ ಕೇಂದ್ರಗಳು ಮತ್ತು ತಾಲೂಕು ಕೇಂದ್ರಗಳಿಗೆ ಸುಮಾರು 5000 ಕಿಲೋ ಮೀಟರ್ ಪ್ರವಾಸ ಕೈಗೊಂಡ ಶ್ರೀಗಳ ಸೇವಾ ಕಾರ್ಯ ಮೆಚ್ಚುವಂಥದ್ದು ಎಂದರು.
ಬಂಡೆಪ್ಪಾ ಮೂಲೆಗೆ ಮಾತನಾಡಿ, ಚನ್ನಬಸವ ಪಟ್ಟದ್ದೇವರು ಮಾಡಿದ ಶೈಕ್ಷಣಿಕ ಸೇವೆಯನ್ನು ಸ್ಮರಣೆ ಮಾಡಿಕೊಂಡು ಅದೇ ದಾರಿಯಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ ಎಂದರು. ಕಸಪಾ ಸದಸ್ಯ ಚಂದ್ರಶೇಖರ ತಂಗಾ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶದೊಂದಿಗೆ ಐತಿಹಾಸಿಕವಾದ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಇದಾಗಲಿದೆ. ನಾವೆಲ್ಲರೂ ಕೈಜೋಡಿಸಿ, ಈ ಸಮಾವೇಶ ಯಶಸ್ವಿಗೊಳಿಸೋಣವೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿಕರಾವ ಹೌಶಟ್ಟಿ ವಹಿಸಿದ್ದರು. ಮಹಾದೇವ ಶಟಗಾರ ಸ್ವಾಗತಿಸಿದರು. ರೇಖಾ ಮಂಜುನಾಥ ನಿರೂಪಿಸಿ, ವಂದಿಸಿದರು. ಗ್ರಾಮದ ಮುಖಂಡರಾದ ಜಗನ್ನಾಥ ದೇವಣಿ, ಅನಿಲ ಕುಮಾರ ಸಿಂಧಗೆರೆ, ಬಂಡೆಪ್ಪ ಶೇರಿ, ರಾಜಕುಮಾರ ದೇವಣಿ, ಅಕ್ಕಮಹಾದೇವಿ ಕಲಾ ಬಳಗ ಕಂದಗೂಳ ಸೇರಿದಂತೆ ಶಿಕ್ಷಕರು, ಶಿಕ್ಷಕಿಯರು, ಗಣ್ಯರು, ಯುವಕರು, ಮಕ್ಕಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.