ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಮೊದಲು ಬಂಧಿತನಾಗಿದ್ದ ಶಂಕಿತ ಆರೋಪಿ, ಮುಂಬೈ ಪೊಲೀಸರಿಂದ ನನ್ನ ಜೀವನ ಹಾಳಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾನೆ. ಆಕಾಶ್ ಕೈಲಾಶ್ ಕನೋಜಿಯಾ ಎನ್ನುವ ಯುವಕನನ್ನು ಪೊಲೀಸರು ಮೊದಲು ಬಂಧಿಸಿದ್ದರು. ನಂತರ ಇವನಲ್ಲ ಎಂದು ತಿಳಿದು ಬಿಡಲಾಯಿತು. ಅಷ್ಟರಲ್ಲೇ ಎಲ್ಲೆಡೆ ಇವನೇ ಆರೋಪಿ ಎಂದು ವೈರಲ್ ಆಗಿತ್ತು. ಮಾಧ್ಯಮಗಳಲ್ಲೂ ಇದು ಪ್ರಸಾರವಾಗಿತ್ತು.
ಮುಂದೆ ಜನವರಿ 19ರಂದು ಬಾಂಗ್ಲಾ ಮೂಲದ ಶರೀಫುಲ್ಲಾ ಇಸ್ಲಾಂ ಶೆಹಜಾದ್ ಮೊಹಮ್ಮದ್ ಉರುಫ್ ವಿಜಯ್ ದಾಸ್ ಖಾನ್ ನನ್ನು ಪೊಲೀಸರು ಬಂಧಿಸಿದರು. ಇವನೇ ನಿಜವಾದ ಆರೋಪಿ ಎಂದು ಗೊತ್ತಾದ ಬಳಿಕ ಆಕಾಶ್ ಕನೋಜಿಯಾನನ್ನು ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಮಾಧ್ಯಮದವರ ಮುಂದೆ ಮಾತನಾಡಿರುವ ಆಕಾಶ್, ಮುಂಬೈನವರು ಮಾಡಿದ ತಪ್ಪಿನಿಂದ ನನ್ನ ಜೀವನ ಹಾಳಾಗಿದೆ. ಕೆಲಸ ಕಳೆದುಕೊಂಡಿದ್ದೇನೆ. ಮದುವೆಯಾಗಿ ವಧುವಿನ ಕಡೆಯವರು ಮದುವೆ ನಿರಾಕರಿಸಿದ್ದಾರೆ. ಇದರಿಂದ ನಮ್ಮ ಮನೆಯಲ್ಲಿ ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ. ಅವಮಾನಗಳನ್ನು ಎದುರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾನೆ.
ಜನವರಿ 16ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಸೈಫ್ ಅಲಿಖಾನ್ ಮೇಲೆ ಚಾಕುವಿನಿಂದ ಇರಿಯಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಶಸ್ತ್ರ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ. ಜನವರಿ 18ರಂದು ಆಕಾಶನನ್ನು ಶಂಕಿತ ಆರೋಪಿ ಎಂದು ಬಂಧಿಸಲಾಯಿತು. ಮುಂದೆ ಜನವರಿ 19ರಂದು ಖಚಿತ ಮಾಹಿತಿ ಮೇರೆಗೆ ಶರೀಫುಲ್ಲಾ ಇಸ್ಲಾಂ ಶೆಹಜಾದ್ ಮೊಹಮ್ಮದ್ ಎನ್ನುವ ಆರೋಪಿಯನ್ನು ಬಂಧಿಸಲಾಯಿತು.