ಪ್ರಜಾಸ್ತ್ರ ಸುದ್ದಿ
ಧಾರವಾಡ(Dharwad): ಬೆಂಗಳೂರಿನ ಸಿರಿವರ ಪ್ರಕಾಶನ ಹೊರ ತಂದಿರುವ ಹಿರಿಯ ಪತ್ರಕರ್ತ, ಲೇಖಕ ಶಂಕರ ಪಾಗೋಜಿ ಅವರ ‘ಗಾಂಧಿ ಮಂದಿರ’ ಕಥಾ ಸಂಕಲನ 2024 ಡಿಸೆಂಬರ್ 20ರಂದು ಬಿಡುಗಡೆಯಾಗುತ್ತಿದೆ. ನಗರದ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ಕೊನೆ ನಮಸ್ಕಾರ ಎನ್ನುವ ಹಾಸ್ಯ ನಾಟಕ ಪ್ರದರ್ಶನ ಸಹ ಇರಲಿದೆ ಎಂದು ಹಿರಿಯ ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ‘ಗಾಂಧಿ ಮಂದಿರ’ ಕಥಾ ಸಂಕಲನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ರಂಗಾಯಣ ನಿರ್ದೇಶಕ ರಾಜು ತಾಳಿಕೊಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಭಾಗವಹಿಸಲಿದ್ದಾರೆ. ನಟರಾಜ ಮೂರಶಿಳ್ಳಿ ಕೃತಿ ಪರಿಚಯ ಮಾಡಲಿದ್ದಾರೆ. ಸಿರಿವರ ಪ್ರಕಾಶನದ ಪ್ರಕಾಶಕರಾದ ರವೀಂದ್ರನಾಥ ಸಿರಿವರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ದೇವರಹುಬ್ಬಳ್ಳಿಯ ಅವ್ವ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬನಹಟ್ಟಿಯ ಬಿ.ಆರ್.ಪೊಲೀಸ್ ಪಾಟೀಲ ಬರೆದಿರುವ ‘ಕೊನೆ ನಮಸ್ಕಾರ’ ಎನ್ನುವ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಮಲ್ಲಪ್ಪ ಹೊಂಗಲ್ ನಿರ್ದೇಶನವಿದೆ. ನಾಟಕದಲ್ಲಿ ಮಾಸ್ತರ್ ಪಾತ್ರದಲ್ಲಿ ಡಾ.ಬಸವರಾಜ ಹೊಂಗಲ್, ಶ್ರೀಕೃಷ್ಣ ಪಾತ್ರದಲ್ಲಿ ಶಂಕರ ಪಾಗೋಜಿ, ಅರ್ಜುನನ ಪಾತ್ರದಲ್ಲಿ ಡಾ.ವಿಶ್ವನಾಥ ಕೋಟಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ. ಈ ನಾಟಕ ವೀಕ್ಷಣೆ ಉಚಿತವಾಗಿದೆ ಎಂದು ತಿಳಿಸಿದರು. ಈ ವೇಳೆ ಸಹದೇವ ಪಾಗೋಜಿ, ದೀಪಕ ದುರ್ಗಾಯಿ, ಬಸವರಾಜ ಗುಡ್ಡಪ್ಪನವರ ಉಪಸ್ಥಿತರಿದ್ದರು.