ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮನರೇಗಾ ಯೋಜನೆಯ ಹೆಸರು ಬದಲಾಯಿಸಿ ವಿಬಿ ಜೀ ರಾಮ್ ಜೀ ಯೋಜನೆ ಕಾಯ್ದೆಯನ್ನು ಹಿಂಪಡೆಯಬೇಕು ಅನ್ನೋ ಆಗ್ರಹದೊಂದಿಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇಲ್ಲಿಂದ ರಾಜಭವನ ಚಲೋ ನಡೆಸಲಾಗುತ್ತಿದೆ.
ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರು, ಪರಿಷತ್ ಸದಸ್ಯರು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದ್ದಾರೆ. ಮನರೇಗಾದಲ್ಲಿ ಸಾಕಷ್ಟು ಅವ್ಯವಹಾರ ಆಗುತ್ತಿತ್ತು, ಅದನ್ನು ತಡೆಯುವ ಸಲುವಾಗಿ ನಾವು ವಿಬಿ ಜೀ ರಾಮ್ ಜೀ ತಂದಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಎಲೆಕ್ಟ್ರಾಲ್ ಬಾಂಡ್ ಕಥೆ ಮುಗಿದ ಬಳಿಕ 10 ಸಾವಿರ ಕೋಟಿ ರೂಪಾಯಿ ಬಿಜೆಪಿಯವರು ಸಂಗ್ರಹ ಮಾಡಿದ್ದಾರಲ್ಲ. ಅದರ ಬಗ್ಗೆ ತನಿಖೆಯಾಗಬೇಕು ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ ಹೇಳಿದರು.
ರಾಮರಾಜ್ಯ ಕಲ್ಪನೆಗೆ ಕಾಯಕಲ್ಪ ಕೊಡುವ ಸಲುವಾಗಿ, ಗ್ರಾಮ ಪಂಚಾಯ್ತಿಗೆ ಶಕ್ತಿಯನ್ನು ನೀಡುವ ಸಲುವಾಗಿ ಮನರೇಗಾ ತರಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಬರುವುದಕ್ಕಿಂತ ಮುಂಚೆ ಗ್ರಾಮ ಪಂಚಾಯ್ತಿಯನ್ನು ಯಾರೂ ಕೇಳುವವರು ಇರಲಿಲ್ಲ. ಕರೆಂಟ್ ಬಿಲ್ ಕಟ್ಟಲು ಆಗುತ್ತಿರಲಿಲ್ಲ. 20 ವರ್ಷಗಳ ಹಿಂದೆ ಯಾವಾಗ ಮನರೇಗಾ ಬಂತೋ ಅಲ್ಲಿಂದ ಇಲ್ಲಿಯವರೆಗೆ ಹಳ್ಳಿಗಳ ಬೆಳವಣಿಗೆ ಆಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.




