ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್(78) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಧ್ಯರಾತ್ರಿ 2.30ರ ಸುಮಾರಿಗೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ವರ್ಷ ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಅದೃಷ್ಟವಶಾತ್ ಬದುಕುಳಿದಿದ್ದರು. ಆದರೆ, ಅಲ್ಲಿಂದ ಅವರ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆ ಕಾಣಿಸುತ್ತಾ ಬಂದಿತ್ತು. ಹೀಗಾಗಿ ನಟನೆಯಿಂದ ದೂರ ಉಳಿದಿದ್ದರು.
ಬ್ಯಾಂಕ್ ನಲ್ಲಿ ಕ್ಲರ್ಕ್ ಕೆಲಸ ಮಾಡಿಕೊಂಡು ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ನಾಟಕ, ಸಿನಿಮಾಗಳಲ್ಲಿ ನಟಿಸುತ್ತಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರಿಗೆ ಬ್ಯಾಂಕ್ ಜನಾರ್ಧನ್ ಎನ್ನುವ ಹೆಸರು ಬಂದಿತು. 1985ರಲ್ಲಿ ಪಿತಾಮಹ ಎನ್ನುವ ಚಿತ್ರದ ಮೂಲಕ ಸಿನಿ ರಂಗಕ್ಕೆ ಬಂದರು. ಅಲ್ಲಿಂದ ಇಲ್ಲಿಯ ತನಕ ಬರೋಬ್ಬರಿ 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಧಾರವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಸಿನಿ ಪ್ರೇಮಿಗಳನ್ನು ನಕ್ಕು ನಲಿಸಿದ್ದಾರೆ.
1949ರಲ್ಲಿ ಚಿತ್ರದುರ್ಗದ ಹೊಳಲ್ಕೇರಿಯಲ್ಲಿ ಜನಿಸಿದ್ದಾರೆ. ಶ್, ತರ್ಲೆ ನನ್ನ ಮಗ, ಕೌರವ, ರೂಪಾಯಿ ರಾಜ ಸೇರಿದಂತೆ ಸಾಕಷ್ಟು ಸಿನಿಮಾಗಳು ಹೆಸರು ತಂದು ಕೊಟ್ಟವರು. ಶ್ ಚಿತ್ರದಲ್ಲಿನ ಪೊಲೀಸ್ ಪಾತ್ರ ಯಾರೂ ಮರೆಯಲು ಸಾಧ್ಯವಿಲ್ಲ. ಚಂದನವನದ ಪ್ರತಿ ಸ್ಟಾರ್ ಹಿರೋ ನಟರೊಂದಿಗೆ ಸಿನಿಮಾ ಮಾಡಿದ್ದಾರೆ. ಮನೆಯ ಹತ್ತಿರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿನಿ ರಂಗದವರು, ಅಭಿಮಾನಿಗಳು, ಸಿನಿ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.