ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನಿಜಕ್ಕೂ ಇದು ಅತ್ಯಂತ ಆಘಾತಕಾರಿ ಘಟನೆಯಾಗಿದೆ. ತಂದೆಯಿಂದಲೇ ಕೇವಲ 5 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎನ್ನುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯ ತಾಯಿ ದೂರು ನೀಡಿದ್ದಾರೆ. ಆಗಸ್ಟ್ 30ರಂದು ಈ ಘಟನೆ ನಡೆದಿದ್ದು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದ್ದಾರೆ.
ಆರೋಪಿ ಹಾಗೂ ಪತ್ನಿ ಜಿಲ್ಲೆಯ ಗ್ರಾಮವೊಂದರಿಂದ ನಗರಕ್ಕೆ ಬಂದು ವಾಸವಾಗಿದ್ದಾರೆ. ಮನೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದು, ಇಬ್ಬರು ಹೆಣ್ಮಕ್ಕಳಿದ್ದಾರೆ. ಗಂಡ, ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿದ್ದು, ಊರಿಗೆ ಹೋಗುವುದು ಬರುವುದು ಮಾಡುತ್ತಿದ್ದನಂತೆ. ಆಗಸ್ಟ್ 30ರ ರಾತ್ರಿ ಸುಮಾರು 8 ಗಂಟೆಗೆ ಗಣಪತಿ ತೋರಿಸಿಕೊಂಡು ಬರುವುದಾಗಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದನಂತೆ. ಈ ವೇಳೆ ಚಿಕ್ಕ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಪತ್ನಿ ದೂರು ದಾಖಲಿಸಿದ್ದಾಳೆ.