ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಾನು ಸನ್ಮಾನ ಮಾಡಿಸಿಕೊಳ್ಳುವುದು ದೊಡ್ಡದಲ್ಲ. ಇತರರನ್ನು ಗೌರವಿಸುವುದು, ಮೇಲಕ್ಕೆ ಎತ್ತಬೇಕು ಎಂದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಪಿ.ಎಚ್ಡಿ ಪಡೆದವರಿಗೆ ಸನ್ಮಾನ ಮಾಡಬೇಕು ಎಂದುಕೊಂಡು ಕಾರ್ಯಕ್ರಮ ಮಾಡಿದ ಶ್ರೀ ಶಾಂತಗಂಗಾಧರ ಮಹಾಸ್ವಾಮಿಗಳ ಗುಣ ದೊಡ್ಡದು ಎಂದು, ವಿಜಯಪುರದ ಜ್ಞಾನ ಯೋಗಾಶ್ರಮದ ಅಧ್ಯಕ್ಷರಾದ ಶ್ರೀ ಬಸವಲಿಂಗ ಸ್ವಾಮಿಗಳು ಹೇಳಿದರು. ಪಟ್ಟಣದ ಗುರುದೇವ ಆಶ್ರಮದ ಶಾಂತಗಂಗಾಧರ ಮಹಾಸ್ವಾಮಿಗಳ 78ನೇ ಜನ್ಮ ದಿನೋತ್ಸವದ ನಿಮಿತ್ತವಾಗಿ ಭಾನುವಾರ ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಲ್ಲಿಕಾರ್ಜುನಸ್ವಾಮಿಗಳು ನೂರಾರು ಸಸಿಗಳನ್ನು ಹಚ್ಚಿದ್ದಾರೆ. ಅವರು ಹಚ್ಚಿದ ಸಸಿಗಳು ಇಂದು ಜ್ಞಾನದ ಹಣ್ಣನ್ನು ನೀಡುತ್ತಿವೆ. ಸಿದ್ದೇಶ್ವರ ಸ್ವಾಮಿಗಳು, ಶಾಂತಗಂಗಾಧರ ಮಹಾಸ್ವಾಮಿಗಳು ಅವರ ಶಿಷ್ಯರು. ನಾವೆಲ್ಲ ಸಂಭ್ರಮ ಪಡಬೇಕು. ಶಾಂತಗಂಗಾಧರ ಮಹಾಸ್ವಾಮಿಗಳು ಡಾಕ್ಟರೇಟ್ ಬಯಸಿದವರಲ್ಲ. ಅವರ ಸಾಧನೆಗೆ ಹುಡುಕಿಕೊಂಡು ಬಂದಿದೆ. ಸಾಕಷ್ಟು ಏಳುಬೀಳುಗಳನ್ನು ಎದುರಿಸಿದವರು. ಅದೆಲ್ಲವನ್ನು ಮೆಟ್ಟಿ ನಿಂತು ಸಮಾಜೋಧಾರ್ಮಿಕ ಕೆಲಸಗಳ ಜೊತೆಗೆ ಸಾಹಿತ್ಯದ ಕೃಷಿಯನ್ನು ಮಾಡಿದವರು. ಮಲ್ಲಿಕಾರ್ಜುನಸ್ವಾಮಿಗಳು ಇವರಿಗೆ ಶಾಂತಾನಂದ ಎಂದು ನಾಮಕರಣ ಮಾಡಿದ್ದರು. ಮುಂದೆ ಅದು ಶಾಂತಗಂಗಾಧರ ಆಯ್ತು. ಇನ್ನು ನೂರೆಂಟು ಕಾಲ ಬಾಳಲಿ. ಇವರಿಂದ ಇನ್ನಷ್ಟು ಕೊಡುಗೆ ಸಮಾಜಕ್ಕೆ ಸಿಗಲಿ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೋಳೆ ಗ್ರಾಮದ ಸಂಚಾರಿ ಶರಣರಾದ ಡಿ.ಎಸ್ ಚಾಳೇಖರ್, ಶಾಂತಗಂಗಾಧರ ಮಹಾಸ್ವಾಮಿಗಳು ಅದ್ಭುತ ವಾಗ್ಮಿಗಳು, ಪ್ರವಚನಕಾರರು. ಬೆಳಗಾವಿ, ಹಾವೇರಿ, ಹುಬ್ಬಳ್ಳಿ ಸೇರಿ ಅನೇಕ ಕಡೆ ಅಪಾರ ಭಕ್ತರನ್ನು ಹೊಂದಿದ್ದಾರೆ. ತಿಂಗಳಕಾಲ ಪ್ರವಚನ ನೀಡಿದ್ದಾರೆ. ಆದರೆ, ಈ ಭಾಗದ ಜನರು ಅವರ ಪಾಂಡಿತ್ಯವನ್ನು ಬಳಸಿಕೊಳ್ಳುವಲ್ಲಿ ಯಡವಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ವಿಶೇಷ ಸನ್ಮಾನ ಸ್ವೀಕರಿಸಿದ ಡಾ.ಮಹೇಶ ಜಿ.ಕೇರಿ, ಡಾ.ಗೀತಾ ಕುಸನೂರ ಮಾತನಾಡಿದರು. ಶಾಂತಗಂಗಾಧರ ಸ್ವಾಮಿಗಳು ಅಧ್ಯಕ್ಷೀಯ ನುಡಿಗಳನ್ನಾಡಿದರು. ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ ಸುರೇಶ ನಿಂಗಪ್ಪ ಗುಡ್ಡಳ್ಳಿ, ಸಚಿನ್ ಬೂದಿಹಾಳ, ಮಲ್ಲಿಕಾರ್ಜುನ ಕ.ಗುಡ್ಡಳ್ಳಿ, ಶ್ರೀಶೈಲ ಗುಂ.ಗುಡ್ಡಳ್ಳಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜ್ಞಾನ ಯೋಗಾಶ್ರಮದ ಗುರಲಿಂಗ ಸ್ವಾಮಿಗಳು, ಮಧೋಳದ ಕೇಶವಮಠದ ಸುಕಮುನಿ ಸ್ವಾಮಿಗಳು, ಲಿಂಗಸ್ಗೂರಿನ ಮಹಾದೇವಸ್ವಾಮಿಗಳು, ಕಾಗವಾಡದ ಮಡಿವಾಳ ಹೆಗಡೆ, ಉಗಾರದ ಸುರೇಶ ಕೋಳಿ, ಭೀಮಣ್ಣ ಸುಣಗಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಿರಣಕುಮಾರ ನಾಟೀಕಾರ, ನಿತ್ಯಾನಂದ ಸೋಂಪುರ, ಶ್ರೀಶೈಲ, ಮಲ್ಲಿನಾಥ, ಮಂಜು ಸಾಲವಟಗಿ, ಶಿವಾನಂದ ಸಿರಕನಳ್ಳಿ, ಸಂಜೀವಕುಮಾರ ಡಾಂಗಿ, ಮಡಿವಾಳ ನಾಯ್ಕೋಡಿ, ಮಲ್ಲು ಹಿರೋಳ್ಳಿ, ರಾಜು ನರಗೋದಿ ಸೇರಿದಂತೆ ಭಕ್ತರು, ಶಿಷ್ಯರು ಭಾಗವಹಿಸಿದ್ದರು. ಪತ್ರಕರ್ತ ನಾಗೇಶ ತಳವಾರ ಸ್ವಾಗತ ಹಾಗೂ ಪ್ರಾಸ್ತವಿಕವಾಗಿ ಮಾತನಾಡಿದರು. ಉಪನ್ಯಾಸಕ ಅಶೋಕ ಬಿರಾದಾರ ನಿರೂಪಿಸಿ, ವಂದಿಸಿದರು.