Ad imageAd image

ಪುರಸಭೆಗೆ ಅಂಟಿದ ಕಳಂಕ ಅಳಿಸುವೆ: ಶಾಂತವೀರ ಬಿರಾದಾರ

ಸಿಂದಗಿ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಂದಿಷ್ಟು ಕನಸು ಹಾಗೂ ಯೋಜನೆಗಳಿವೆ. ಅಧ್ಯಕ್ಷನಾಗಿ ನನಗೆ ಇರುವ ಅಲ್ಪ ಅವಧಿಯಲ್ಲಿಯೇ ಪುರಸಭೆಗೆ

Nagesh Talawar
ಪುರಸಭೆಗೆ ಅಂಟಿದ ಕಳಂಕ ಅಳಿಸುವೆ: ಶಾಂತವೀರ ಬಿರಾದಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಸಿಂದಗಿ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಂದಿಷ್ಟು ಕನಸು ಹಾಗೂ ಯೋಜನೆಗಳಿವೆ. ಅಧ್ಯಕ್ಷನಾಗಿ ನನಗೆ ಇರುವ ಅಲ್ಪ ಅವಧಿಯಲ್ಲಿಯೇ ಪುರಸಭೆಗೆ ಅಂಟಿಕೊಂಡಿರುವ ಕಳಂಕವನ್ನು ಅಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು. ಗುರುವಾರ ಪುರಸಭೆ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಗೊಂಡ ವಿಷಯಗಳು ಯಾವ ಹಂತದಲ್ಲಿವೆ, ಏನೆಲ್ಲ ಕೆಲಸಗಳು ನಡೆಯುತ್ತಿವೆ ಎನ್ನುವುದರ ಕುರಿತು ಮಾಹಿತಿ ನೀಡಿದರು.

ಆಶ್ರಯ ವಸತಿಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳಿಗೆ ಕಲ್ಲು ಹಾಗೂ ಗಡಿ ನಿರ್ಮಿಸುವ ಕೆಲಸ ನಡೆದಿದೆ. ಖಾತಾ ಬದಲಾವಣೆ ಸಂಬಂಧ ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಸದ್ಯ ಸುಮಾರು 50 ಅರ್ಜಿಗಳು ಬಂದಿವೆ. ಎನ್ಎ ಲೇಔಟ್ ಗಳಲ್ಲಿ ಸಾರ್ವಜನಿಕ ಸೌಲಭ್ಯಕ್ಕೆ ಬಿಟ್ಟ ಜಾಗವನ್ನು ಕಡ್ಡಾಯವಾಗಿ ಪುರಸಭೆಗೆ ಬಿಡಬೇಕು. ಕಾಂಪೌಂಡ್ ಹಾಕಿ ಬೋರ್ಡ್ ಅಳವಡಿಸಬೇಕು. ಭೂಪರಿವರ್ತನೆ ಕುರಿತು ಸಮಿತಿ ಮುಂದೆ ಚರ್ಚೆ, ಕಂಪ್ಯೂಟರ್ ಉತಾರಿ ನೀಡುವ ವ್ಯವಸ್ಥೆ ಮಾಡಿ ಏಜೆಂಟ್ ರ ಹಾವಳಿ ತಪ್ಪಿಸಲಾಗುವುದು. ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿ ಮನೆ ಮನೆಗೆ ಕಳಿಸಲಾಗುವುದು. ಸಿಬ್ಬಂದಿಗೆ ಬಯೋಮೆಟ್ರಿಕ್ ವ್ಯವಸ್ಥೆ, ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಒತ್ತು ನೀಡಲಾಗುವುದು ಎಂದರು.

‘ನನ್ನ ಸಹೋದರ ಮೃತಪಟ್ಟು 2 ವರ್ಷವಾಗಿದೆ. ಅವರ ನೆನಪಿನಲ್ಲಿ ನನ್ನ ಸ್ವಂತ ಹಣದಿಂದ ಪುರಸಭೆಗೆ ಮುಕ್ತಿ ವಾಹನ ನೀಡುತ್ತೇನೆ. ಬಡವರು ಇದರ ಉಪಯೋಗ ಪಡೆದುಕೊಳ್ಳಬಹುದು. ಇದರ ನಿರ್ವಣೆ ಜವಾಬ್ದಾರಿಗೆ ಪುರಸಭೆಗೆ ಸಂಬಂಧಿಸಿದ್ದು, ಇದನ್ನು ಸಾರ್ವಜನಿಕರಿಗೆ ಉಚಿತ ಸೇವೆಗೆ ನೀಡಬೇಕು ಎಂದು ಅಧಿಕಾರಿಗಳಲ್ಲಿ ಕೇಳಿಕೊಳ್ಳುತ್ತೇನೆ.’ – ಶಾಂತವೀರ ಬಿರಾದಾರ, ಅಧ್ಯಕ್ಷರು, ಪುರಸಭೆ

ಹೊಸ ಲೇಔಟ್ ಮಾಲೀಕರು ಪುರಸಭೆಗೆ ಮಾಹಿತಿ ನೀಡಬೇಕು. ವಾಣಿಜ್ಯ ಕಟ್ಟಡಗಳು ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ಅಂಗಡಿಕಾರರು ಸಹ ಕಡ್ಡಾಯವಾಗಿ ಆನ್ಲೈನ್ ಪರವಾನಿಗೆ ಹೊಂದಬೇಕು. ಒಮ್ಮೆ ಲೈಸನ್ಸ್ ಪಡೆದರೆ ಅದು ಮೂರು ವರ್ಷ ಚಾಲ್ತಿಯಲ್ಲಿರುತ್ತೆ. ಮತ್ತೆ ನವೀಕರಣ ಮಾಡಿಕೊಳ್ಳಬೇಕು. 6 ಅಭಿವೃದ್ಧಿ ಯೋಜನೆಗಳ ಕಾಮಗಾರಿ ನಡೆಯುತ್ತಿವೆ. ಅಕ್ರಮ ನಳಗಳ ಸಂಪರ್ಕ ಸಕ್ರಮ ಮಾಡಿಕೊಳ್ಳಲು ಒಂದು ತಿಂಗಳು ಕಾಲಾವಕಾಶ ನೀಡಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು 5 ಸಾವಿರದಿಂದ 3 ಸಾವಿರ ಮಾಡಿ ರಿಯಾತಿ ನೀಡಲಾಗುವುದು. ಪುರಸಭೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಏಜೆಂಟರ್ ಕುರಿತು ಪೊಲೀಸರಿಗೆ ದೂರು ಸಲ್ಲಿಸುವ ಕುರಿತು ಚರ್ಚಿಸಲಾಗುತ್ತಿದೆ. ವಿವೇಕಾನಂದ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗಿನ ರಸ್ತೆಯನ್ನು ಏಕಮುಖ ಸಂಚಾರ ಮಾಡಲಾಗುವುದು. ಒಟ್ಟಿನಲ್ಲಿ ಸಿಂದಗಿ ಪುರಸಭೆಯಲ್ಲಿ ಬದಲಾವಣೆ ತಂದು ಜನಸ್ನೇಹಿಯಾಗಿ ಮಾಡಲಾಗುವುದು ಎಂದರು. ಈ ವೇಳೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಜೆಇ ಅಜರ್ ನಾಟಿಕಾರ, ಸದಸ್ಯ ಸಂದೀಪ ಚೌರ, ನಾಮನಿರ್ದೇಶಿತ ಸದಸ್ಯ ಸಾಯಬಣ್ಣ ಪುರದಾಳ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article