ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸಿಂದಗಿ ಪ್ರೀಮಿಯರ್ ಲೀಗ್ 2025ರ ಆವೃತ್ತಿಗೆ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ, ಉಪಾಧ್ಯಕ್ಷರಾಗಿ ಹಾಸೀಂ ಆಳಂದ ಆಯ್ಕೆ ಆಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ (ಪುಣ್ಯತಿಥಿ) ಅಂಗವಾಗಿ ಪ್ರತಿವರ್ಷದಂತೆ ಈ ವರ್ಷ ಸಹ ಹೊನಲು ಬೆಳಕಿನ ಕ್ರಿಕೆಟ್ ಲೀಗ್ ಪಂದ್ಯಗಳು ನಡೆಯಲಿವೆ. ಡಿಸೆಂಬರ್ 6ರಿಂದ ಟೂರ್ನಿ ಪ್ರಾರಂಭವಾಗಲಿದೆ ಎಂದು ಎಸ್ ಪಿಎಲ್ ಮುಖ್ಯ ಸಂಯೋಜಕ ರಾಜಶೇಖರ ಕೂಚಬಾಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಎಸ್.ಪಿಎಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಮಾಡುವುದು ಎಸ್.ಪಿಎಲ್ ಸಂಯೋಜಕರು ಮಾಡಿಕೊಂಡು ಬಂದಿರುವುದು ರೂಢಿ. ಈ ಬಾರಿ ಸಿಂದಗಿ ಹೆಸರು ಮತ್ತಷ್ಟು ವಿಸ್ತರಿಸಲು ಜಿಲ್ಲೆಯ ಪ್ರಮುಖ ಆಟಗಾರರನ್ನು ಈ ಬಾರಿ ಪಾಲ್ಗೊಳ್ಳಲಿರುವ 8 ತಂಡದ ಮಾಲೀಕರು ತಮ್ಮ ತಂಡದಲ್ಲಿ ಕೂಡಿಸಿಕೊಂಡಿರುವುದು ತಾಲೂಕು ಮತ್ತು ಗ್ರಾಮೀಣ ಆಟಗಾರರಿಗೆ ವಿಶೇಷ ಅನುಭವ ದೂರಕಲಿದೆ ಎಂದರು.
ಪ್ರಥಮ ಬಹುಮಾನವನ್ನು ಯುವ ಉದ್ಯಮಿ ವೆಂಕಟೇಶ.ಆರ್ ಗುತ್ತೇದಾರ 2 ಲಕ್ಷ ರೂಪಾಯಿ, ದ್ವಿತೀಯ ಬಹುಮಾನ ಬಿಜೆಪಿ ಮುಖಂಡ ರವಿ ನಾಯ್ಕೋಡಿ 1 ಲಕ್ಷ ರೂಪಾಯಿ, ತೃತೀಯ ಬಹುಮಾನ ರೈತ ಮುಖಂಡ ಪೀರು ಕೇರೂರ 50 ಸಾವಿರ ರೂಪಾಯಿ ಹಾಗೂ ನಾಲ್ಕನೇ ಬಹುಮಾನ ಕಾಂಗ್ರೆಸ್ ಯುವ ಮುಖಂಡ ಇರ್ಫಾನ ಬಾಗವಾನ ನೀಡಿದ್ದಾರೆ. ‘ಅರಿವೇ ಅಂಬೇಡ್ಕರ್-ಅಮರ ಅಂಬೇಡ್ಕರ್’ ಎಂಬ ಘೋಷವಾಕ್ಯದೊಂದಿಗೆ ಅಂಬೇಡ್ಕರರ ಸ್ಮರಣೆ ಟೂರ್ನಿಯುದ್ದಕ್ಕೂ ನಡೆಯಲಿದೆ ಎಂದು ಹೇಳಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಂತವೀರ ಬಿರಾದಾರ ಮಾತನಾಡಿ, ನಿಮ್ಮಲ್ಲಿ ಒಬ್ಬರಾಗಿ ಎಸ್.ಪಿಎಲ್ ಹಾಗೂ ಸಿಂದಗಿಯ ಉತ್ತುಂಗಕ್ಕೆ ಶ್ರಮಿಸುವೆ ಎಂದರು. ಈ ವೇಳೆ ಎಸ್.ಪಿಎಲ್.ಸಹ ಸಂಯೋಜಕ ಜಿಲಾನಿ ನಾಟೀಕಾರ, ಸಂಯೋಜಕರಾದ ಮಹ್ಮದ್ ಪಟೇಲ ಬಿರಾದಾರ, ಮಲ್ಲು ಕೂಚಬಾಳ, ಶಿವಾನಂದ ಆಲಮೇಲ, ಹುಸೇನ ತಾಂಬೋಳಿ, ಸಿದ್ದು ಮ್ಯಾಗೇರಿ, ಬಾಲಕೃಷ್ಣ ಛಲವಾದಿ, ಮುತ್ತು, ದಿನೇಶ ಉಪಸ್ಥಿತರಿದ್ದರು.




