ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಮರಗಳ ಮಹಾತಾಯಿ, ಶತಾಯುಷಿ ಸಾಲುಮರದ ತಿಮ್ಮಕ್ಕ(114) ಅವರು ಶುಕ್ರವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರಾಗಿದ್ದು, 1911ರಲ್ಲಿ ಜನಿಸಿದರು. ಇವರ ಪತಿ 1991ರಂದು ನಿಧನರಾದರು. ಈ ದಂಪತಿಗೆ ಮಕ್ಕಳಿಲ್ಲ. ಆದರೆ, ತಿಮ್ಮಕ್ಕ ಅವರು ಮರಗಳನ್ನು ನೆಡುವ ಮೂಲಕ ವೃಕ್ಷಮಾತೆಯಾದರು. ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತಿಯನ್ನು ಗಳಿಸಿದರು. ಪರಿಸರವಾದಿಯಾದ ಉಮೇಶ್ ಬಳ್ಳೂರು ಇವರ ಸಾಕು ಮಗನಾಗಿದ್ದು, ಇವರ ಸಂಪೂರ್ಣ ಜವಾಬ್ದಾರಿಯನ್ನು ಅವರು ನೋಡಿಕೊಳ್ಳುತ್ತಿದ್ದರು.
ಇವರ ಕೊಡುಗೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. 2019ರಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಇವರಿಗೆ ಸಂದಿದೆ. ಕರ್ನಾಟಕ ಸರ್ಕಾರ ಸಾಲಮರದ ತಿಮ್ಮಕ್ಕ ಹೆಸರಿನ ಟ್ರೀ ಪಾರ್ಕ್ ಗಳನ್ನು ನಾಡಿನಾದ್ಯಂತ ನಿರ್ಮಿಸುತ್ತಿದೆ.




