ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ಸಹಪಾಠಿಗಳ ನಡುವೆ ನಡೆದ ಸಣ್ಣ ಜಗಳ ವಿಕೋಪಕ್ಕೆ ಹೋಗಿ 10ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ಕಳೆದ ರಾತ್ರಿ ನಡೆದಿದೆ. ಸೊಳೆಬಾವಿಯಲ್ಲಿ ಸಂಕೇತ್ ಎನ್ನುವ ವಿದ್ಯಾರ್ಥಿಯ ಕೊಲೆಯಾಗಿದೆ. ಸಂಜೆ ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಬರುವಾಗ ಸ್ನೇಹಿತರ ನಡುವೆ ಜಗಳವಾಗಿದೆ. ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸಂಕೇತ್ ಕುಸಿದು ಬಿದ್ದಿದ್ದಾನೆ. ಆಗ ಕೆಲವರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ. ಅಷ್ಟರಲ್ಲಿಯೇ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ ಅಂತಾ ಎಸ್ಪಿ ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಇನ್ನು ಯಾರಿದ್ದಾರೆ ಅವರನ್ನೆಲ್ಲ ವಶಕ್ಕೆ ಪಡೆಯಲಾಗುವುದು. ಇವರೆಲ್ಲ ಅಪ್ರಾಪ್ತರು ಎಂದು ತಿಳಿದು ಬಂದಿದೆ. ಗಿರೀಶ್ ಅನ್ನೋ ಬಾಲಕನೊಂದಿಗೆ ಇತರರು ಜಗಳವಾಡಿದ್ದಾರೆ. ಆಗ ಸಂಕೇತ್ ಹೋಗಿದ್ದಾನೆ. ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಹೊರಗಡೆಯಿಂದ ಬಂದವರು ಗಲಾಟೆ ಮಾಡಿದ್ದಾರಂತೆ. ಇಬ್ಬರು ಹಳೆಯ ವಿದ್ಯಾರ್ಥಿಗಳು, ಮತ್ತೊಬ್ಬ ಬೇರೆ ಶಾಲೆಯ ವಿದ್ಯಾರ್ಥಿ. ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಇವರು ಬಂದು ಗಲಾಟೆ ಮಾಡಿದ್ದಾರೆ. ಇದನ್ನು ಬಿಡಿಸಲು ಹೋದ ಸಂಕೇತನಿಗೂ ಮನಸೋಇಚ್ಛೆ ಹೊಡೆದಿದ್ದಾರೆ ಎಂದು ಶಾಲೆಯ ಹೆಡ್ ಮಾಸ್ಟರ್ ಹೇಳುತ್ತಿದ್ದಾರೆ. ಮಗನನ್ನು ಕೊಂದವರನ್ನು ಸುಮ್ನೆ ಬಿಡಬಾರದು ಎಂದು ತಾಯಿ ಹೇಳಿದ್ದಾರೆ. ಸಂಕೇತ್ ಅಕ್ಕ ಸಹ ನೋವು ತೋಡಿಕೊಂಡಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ನೀರಿನಲ್ಲಿ ಕೈತೊಳೆಯುತ್ತಿದ್ದಾರೆ.




