ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಖಾಸಗಿ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ. ಬುಧವಾರ ಮುಂಜಾನೆ ತಾಲೂಕಿನ ಗಾಜನೂರು ಅಗ್ರಹಾರ ಹತ್ತಿರದ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ನಡೆದಿದೆ. ದುರ್ಗಾಂಬ ಬಸ್ಸಿನ ನಿರ್ವಾಹಕ ಹೊಸನಗರದ ಅಣ್ಣಪ್ಪ(38) ಹಾಗೂ ಪ್ರಯಾಣಿಕ ಚಳ್ಳಕೆರೆಯ ಹರ್ಷಿತ್(25) ಮೃತ ದುರ್ದೈವಿಗಳು.
ಮಂಗಳೂರಿನಿಂದ ರಾತ್ರಿ ಹೊರಟಿದ್ದ ಬಸ್ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯನ್ನು ತಲುಪಬೇಕಿತ್ತು. ಅಷ್ಟರಲ್ಲಿಯೇ ಇಂತಹದೊಂದು ದುರಂತ ನಡೆದಿದೆ. ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.