ಗೀತಕ್ಕ ಮೌನ.. ಶಿವಣ್ಣ ಮಾತು.. ‘ಕೈ’ ಬಿಟ್ಟ ಮತದಾರ..!

175

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಈ ಬಾರಿಯ ಲೋಕಸಭಾ ಚುನಾವಣೆ ರಾಜಕೀಯ ನಾಯಕರಿಗೆ ಸಾಕಷ್ಟು ಪಾಠ ಕಲಿಸಿದೆ. ಮತದಾರರ ಒಳ ಏಟು ಸಮೀಕ್ಷೆ ಮಾಡಿದ ಸಂಸ್ಥೆಗಳಿಗೂ ಭರ್ಜರಿಯಾಗಿ ಬಿದ್ದಿದೆ. ಹೀಗಾಗಿ ಸೋಲು ಗೆಲುವಿನ ಲೆಕ್ಕಾಚಾರ ಉಲ್ಟಾ ಆಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರಗೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಸರಿಯಾಗಿ ಠಕ್ಕರ್ ಕೊಡ್ತಾರೆ ಎನ್ನುವುದು ಸುಳ್ಳಾಗಿದೆ. ಈ ಮೂಲಕ 2ನೇ ಬಾರಿಗೆ ಸೋಲು ಅನುಭವಿಸಿದ್ದಾರೆ. ಇವರಿಗೆ ಸೋಲಿಗೆ ಅನೇಕ ಕಾರಣಗಳಿದ್ದರೂ ಬಹುತೇಕರು ಹೇಳುವುದು ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪ್ರಚಾರದಲ್ಲಿ ಮಾತನಾಡಿರುವುದನ್ನೇ ಕೇಳಿಸಿಕೊಂಡಿಲ್ಲ. ಇವರ ಪರವಾಗಿ ಪತಿ, ನಟ ಶಿವರಾಜಕುಮಾರ್ ಮಾತ್ರ ಎಲ್ಲೆಡೆ ಮಾತನಾಡಿರುವುದು ಎನ್ನುತ್ತಿದ್ದಾರೆ.

ಅಭ್ಯರ್ಥಿ ಮೌನ.. ಪತಿಯ ಮಾತು ಪೆಟ್ಟು ಕೊಟ್ಟಿತಾ?

ಒಂದು ಕಡೆ ರಾಜಕೀಯ ಕುಟುಂಬದ ಶಕ್ತಿ. ಮತ್ತೊಂದು ಕಡೆ ಸಿನಿಮಾ ಕುಟುಂಬದ ಶಕ್ತಿ ಇದ್ದರೂ ಸಹ ಗೀತಾ ಶಿವರಾಜಕುಮಾರ್ 2ನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ತಂದೆ ಸಿಎಂ ಆಗಿದ್ದವರು. ಸಹೋದರರು ಸಹ ರಾಜಕೀಯದಲ್ಲಿದ್ದಾರೆ. ತಮ್ಮ ಮಧು ಬಂಗಾರಪ್ಪ ಸಚಿವರಾಗಿದ್ದು, ಚುನಾವಣೆಯಲ್ಲಿ ಪೂರ್ತಿ ಬೆಂಬಲಕ್ಕಿದ್ದರು. ಆದರೆ, ಅಭ್ಯರ್ಥಿ ಗೀತಾ ಅವರು ಪ್ರಚಾರ ಸಂದರ್ಭದಲ್ಲಿ ಅವರ ಹೆಚ್ಚು ಮೌನ ಪೆಟ್ಟು ಕೊಟ್ಟಿತಾ ಎನ್ನುವ ಪ್ರಶ್ನೆಗಳು ಎದ್ದಿವೆ. ತಾವು ಸಂಸದರಾಗಿ ಬಂದರೆ ಏನು ಮಾಡುತ್ತೇವೆ, ತಮ್ಮ ಗುರಿ, ಉದ್ದೇಶಗಳು, ಕನಸುಗಳು ಏನು ಅನ್ನೋದು ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಬದಲಾಗಿ ಪತಿ ಶಿವರಾಜಕುಮಾರ್ ಮತಯಾಚನೆ ಮಾಡಿದರು. ಇಲ್ಲಿ ಮಾತನಾಡದವರು ಸಂಸತ್ತಿನಲ್ಲಿ ಹೇಗೆ ಮಾತನಾಡುತ್ತಾರೆ ಎಂದು ಮತದಾರರ ಅರಿತು ಕೈ ಕೊಟ್ಟರಾ?

ಈಶ್ವರಪ್ಪ ಬಂಡಾಯದ ಲಾಭ ಪಡೆಯದೆ ಹೋದ್ರಾ?

ಬಿಜೆಪಿ ಮಾಜಿ ಡಿಸಿಎಂ, ಹಿರಿಯ ನಾಯಕರಾಗಿದ್ದ ಕೆ.ಎಸ್ ಈಶ್ವರಪ್ಪ, ತಮ್ಮ ಪುತ್ರ ಕಾಂತೇಶಗೆ ಟಿಕೆಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಬಂಡಾಯವೆದ್ದರು. ಬಿಜೆಪಿ ನಾಯಕರು ಮನೆಗೆ ಬಂದು ಸಮಾಧಾನ ಮಾಡಿದರೂ ಕೇಳಲಿಲ್ಲ. ಯಡಿಯೂರಪ್ಪ ಹಾಗೂ ಅವರ ಮಕ್ಕಳ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದುತ್ವ, ಮೋದಿ ಎಂದುಕೊಂಡು ಹೋದ್ರು. ಈ ಒಡಕನ್ನು ಕಾಂಗ್ರೆಸ್ ಲಾಭ ಪಡೆಯುವಲ್ಲಿ ಸಂಪೂರ್ಣ ವಿಫಲವಾಯಿತು. ಬರೀ ಗ್ಯಾರೆಂಟಿಗಳನ್ನು ನಂಬಿ ಜನರು ಮತ ಹಾಕುತ್ತಾರೆ. ಜನರ ಮೇಲೆ ಋಣವಿದೆ ಎಂದರೆ ಆಗದು ಅನ್ನೋದು ಈಗ ತಿಳಿದಿದೆ.

ಕುಟುಂಬದ ಕಚ್ಚಾಟವೂ ಗೀತಕ್ಕ ಸೋಲಿಗೆ ಕಾರಣವಾಯಿತಾ?

ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಮಕ್ಕಳಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಗೀತಾ ಶಿವರಾಜಕುಮಾರ್ ನಡುವಿನ ಕಚ್ಚಾಟವೂ ಹಿನ್ನಡೆಗೆ ಕಾರಣವಾಯಿತಾ? ಅಣ್ಣ ಕುಮಾರ್ ಬಂಗಾರಪ್ಪನೇ ತಂಗಿಯ ವಿರುದ್ಧ ಇದ್ದಾರೆ. ಜೆಡಿಎಸ್ ಬಿಟ್ಟು ಬಂದು ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ ಗೆದ್ದು ಶಾಸಕರಾಗಿ, ಸಚಿವರಾಗಿದ್ದಾರೆ. ಬಿಜೆಪಿಯಲ್ಲಿರುವ ಕುಮಾರ್ ಬಂಗಾರಪ್ಪ ಸೋತಿದ್ದಾರೆ. ಹೀಗಾಗಿ ಕುಟುಂಬದೊಳಗಿನ ಬಿರುಕು ಸಹ ಮತದಾರರ ಮೇಲೆ ಪರಿಣಾಮ ಬೀರಿರಬಹುದು. ಶಿವಣ್ಣ ಪ್ರಚಾರದ ವೇಳೆ ಕೊಟ್ಟ ಟಾಂಟ್ ಗಳು ತಿರುಗುಬಾಣವಾಗಿರಬಹುದು. 2014ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಯಡಿಯೂರಪ್ಪ ವಿರುದ್ಧ ಸೋತಿದ್ದ ಗೀತಾ ಶಿವರಾಜಕುಮಾರ್ ಈ ಬಾರಿ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದು ಸೋತಿದ್ದಾರೆ. ಇದರ ಬಗ್ಗೆ ಅವರೆ ಅಧ್ಯಯನ ನಡೆಸಬೇಕಿದೆ.
error: Content is protected !!