ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಅಪಾರ. ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕಾರ್ಯವನ್ನು ವಚನಗಳ ಮೂಲಕ ಮಾಡಿದರು ಎಂದು ಶ್ರೀ ಪದ್ಮರಾಜ ಮಹಿಳಾ ಕಾಲೇಜಿನ ಉಪನ್ಯಾಸಕ ಗಿರೀಶ ಕುಲಕರ್ಣಿ ಹೇಳಿದರು. ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಇಲಾಖೆ, ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದ ಜಗಜ್ಯೋತಿ ಬಸವೇಶ್ವರರು ಹಾಗೂ ಸಿದ್ದರಾಮೇಶ್ವರರು ಕಾಯಕಯೋಗಿ ಶ್ರೇಷ್ಠ ವಚನಕಾರರಾಗಿದ್ದರು. ಅಂತೇಯೆ ಎಲ್ಲ ಶರಣರು ಅವರನ್ನು ಅಪ್ಪಿಕೊಂಡಿದ್ದರು. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ಕಾಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅಶೋಕ ಮನಗೂಳಿ, ಇಂದಿನ ಯುವ ಜನತೆ ಧಾರ್ಮಿಕದೆಡೆಗೆ ಹೋಗದೆ ಆಧುನಿಕ ಜಗತ್ತಿನೆಡೆಗೆ ಹೋಗಿ ದಾರಿ ತಪ್ಪುತ್ತಿದ್ದಾರೆ. ಕಾರಣ ಶರಣರ ಚರಿತ್ರೆಗಳನ್ನು ಹಿಂದುರಿಗಿ ನೋಡಲು ನೈತಿಕ ಶಿಕ್ಷಣ ಅತ್ಯಗತ್ಯ. ಶರಣರ ಜಯಂತಿಗಳನ್ನು ಆಚರಿಸಿದರೆ ಸಾಲದು ಅವರ ಚಿಂತನೆಗಳು ಸದಾ ಜೀವಂತ ಇರಬೇಕಾದರೆ ನಿತ್ಯ ವಚನಗಳ ಪಠಣ ಮಾಡಬೇಕು. ಸಿದ್ದರಾಮೇಶ್ವರ ವೃತ್ತ ಮತ್ತು ಪುತ್ಥಳಿ ಅನಾವರಣ ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ್ ಕರೆಪ್ಪ ಬೆಳ್ಳಿ ಸ್ವಾಗತಿಸಿದರು. ಭೋವಿ ಸಮಾಜದ ತಾಲೂಕಾಧ್ಯಕ್ಷ ಪಂಡಿತ ಯಂಪುರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಕಾರಿ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಮುಖ್ಯಗುರು ಶರಣಬಸವ ಲಂಗೋಟಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ಉಪ-ನೋದಣಾಧಿಕಾರಿ ಕಿರಣಕುಮಾರ ಹಂಪಿಹೊಳಿ, ಕಂದಾಯ ನೀರಿಕ್ಷಕ ಆಯ್.ಎ.ಮಕಾಂದಾರ, ಪುರಸಭೆ ಮಾಜಿ ಸದಸ್ಯ ಮಂಜುನಾಥ ಬಿಜಾಪುರ, ಬಸವರಾಜ ಯರನಾಳ, ರಾಜಣ್ಣ ನಾರಾಯಣಕರ, ತಾಲೂಕು ಕಸಾಪ ಅಧ್ಯಕ್ಷ ವಾಯ್.ಸಿ.ಮಯೂರ, ಮಹೇಶ ಮನಗೂಳಿ, ಗುರಣ್ಣಗೌಡ ಹುಮನಾಬಾದ, ಕುಮಾರ ದೇಸಾಯಿ, ಶಿವಾನಂದ ಹಚಡದ, ಸುನಂದಾ ಯಂಪುರೆ, ಜಯಶ್ರೀ ಹದನೂರ, ಶಾಂತು ರಾಣಾಗೋಳ, ರಾಜಶೇಖರ ನರಗೋದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.




