ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪಕ್ಷದ ಕೆಲ ಹಿರಿಯ ನಾಯಕರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಸೋಮವಾರ ಶೋಕಾಸ್ ನೋಟಿಸ್ ಕಳಿಸಲಾಗಿದೆ. ಬಿಜೆಪಿಯ ಕೇಂದ್ರದ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ. 10 ದಿನಗಳ ಒಳಗಾಗಿ ಇದಕ್ಕೆ ಉತ್ತರಿಸುವಂತೆ ಸೂಚಿಸಲಾಗಿದೆ.
ರಾಜ್ಯ ಘಟಕದ ನಾಯಕತ್ವದ ವಿರುದ್ಧ ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದೀರಿ. ಪಕ್ಷದ ನಿಲುವಿಗೆ ವಿರುದ್ಧವಾಗಿ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದೀರಿ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿವೆ. ಇತರೆ ರಾಜಕೀಯ ಪಕ್ಷಗಳ ವೇದಿಕೆಯಲ್ಲಿ ಚರ್ಚೆಯಾಗಿವೆ. ಈ ಹಿಂದೆ ಹಲವು ಬಾರಿ ಶೋಕಾಸ್ ನೋಟಿಸ್ ನೀಡಲಾಗಿದೆ. ಮತ್ತೆ ಆ ರೀತಿ ಮಾಡುವುದಿಲ್ಲವೆಂದು ಹೇಳಿ, ಅಶಿಸ್ತು ಮುಂದುವರೆದಿದೆ. ರಾಜಕೀಯ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಲ್ಲಿ ಪಕ್ಷದ ನಿಲುವು ಧಿಕ್ಕರಿಸಿ ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ. ನಿಮ್ಮ ವಿರುದ್ಧ ಕ್ರಮ ಯಾಕೆ ತೆಗೆದುಕೊಳ್ಳಬಾರದು ಎನ್ನುವುದಕ್ಕೆ 10 ದಿನಗಳೊಳಗಾಗಿ ಉತ್ತರಿಸಿ ಎಂದು ಹೇಳಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್, ಬಿಜೆಪಿಯ ಶಿಸ್ತು ಸಮಿತಿ ಮುಖ್ಯಸ್ಥರು ನೀಡಿರುವ ಶೋಕಾಸ್ ನೋಟಿಸ್ ಗೆ ಉತ್ತರ ನೀಡುತ್ತೇನೆ. ಕರ್ನಾಟಕ ಬಿಜೆಪಿ ಸದ್ಯದ ಸ್ಥಿತಿಗತಿಯ ಬಗ್ಗೆ ವಾಸ್ತವಾಂಶಗಳನ್ನು ತೆರೆದಿಡುತ್ತೇನೆ. ಹಿಂದುತ್ವಪರ, ಭ್ರಷ್ಟಾಚಾರ, ವಕ್ಫ್ ಆಸ್ತಿ ವಿಚಾರ, ಕುಟುಂಬ ರಾಜಕಾರಣದ ವಿರುದ್ಧದ ಹೋರಾಟದಲ್ಲಿ ನನ್ನ ಬದ್ಧತೆಯು ಅಚಲವಾಗಿ ಉಳಿಯಲಿದೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಶಾಸಕ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ನೋಟಿಸ್ ಗೆ ಯಾವ ರೀತಿ ನೀಡಬೇಕೋ ನೀಡುತ್ತೇವೆ. ವಿಜಯೇಂದ್ರ ಇನ್ನು ಸಣ್ಣ ಹುಡುಗ. ಕೂಡಲೇ ಸ್ಥಾನ ಬಿಟ್ಟುಕೊಡಲಿ. ಅವನಿಗೆ ರಾಜಕಾರಣ ಗೊತ್ತಿಲ್ಲ. ಯಡಿಯೂರಪ್ಪ ಹುಟ್ಟು ಹೋರಾಟಗಾರ. ಅವರಿಗೆ ಎಲ್ಲವೂ ಗೊತ್ತಿದೆ. ಭವಿಷ್ಯದಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷನಾಗಲಿ ಎನ್ನುವ ಮೂಲಕ ನೇರವಾಗಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗೆ ಇಳಿಯಲಿ ಎನ್ನುವ ಮಾತುಗಳನ್ನು ಹೇಳಿದ್ದಾರೆ.